ಆಂಧ್ರಪ್ರದೇಶ: ವಿದ್ಯಾವಂತ ಪೋಷಕರು ಮೂಢನಂಬಿಕೆಗೆ ಬಲಿಯಾಗಿ ತಮ್ಮ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಅಲೈಕ್ಯ(27) ಮತ್ತು ಬಿಬಿಎ ಕಲಿಯುತ್ತಿದ್ದ ಸಾಯಿದಿವ್ಯ (22) ಮೂಢನಂಬಿಕೆಗೆ ಬಲಿಯಾದವರು. ಸಾಯಿದಿವ್ಯ ಎಆರ್ ರೆಹಮಾನ್ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿಯಾಗಿದ್ದಾರೆ.

ತಂದೆ ಪುರುಷೋತ್ತಮ್ ನಾಯ್ಡು ಸರ್ಕಾರಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ತಾಯಿ ಪದ್ಮಜಾ ಅವರು ಖಾಸಗಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ವಿದ್ಯೆ ಇದ್ದರೂ ಮನೆಯಲ್ಲಿ ನಿತ್ಯ ಮಾಟ-ಮಂತ್ರದಂತಹ ಪೂಜೆಗಳು ನಡೆಯುತ್ತಿದ್ದವಂತೆ. ಇದೀಗ ಎಂದಿನಂತೆ ಪೂಜೆ ಮಾಡುತ್ತಿದ್ದ ಪೋಷಕರು ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಕೊಲೆ ಮಾಡಿದ್ದಾರೆ.

ಪೋಷಕರಿಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮದನಪಲ್ಲಿ ಡಿಎಸ್ಪಿ ರವಿ ಮನೋಹರಾಚಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.