ಪುಣೆ( ಮಹಾರಾಷ್ಟ್ರ): 11 ವರ್ಷದ ಬಾಲಕನೊಬ್ಬನನ್ನು ಸುಮಾರು ಎರಡು ವರ್ಷಗಳಿಂದ ನಾಯಿಗಳೊಂದಿಗೆ ಲಾಕ್ ಮಾಡಲಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ವಿಚಿತ್ರ ಎಂದರೆ ಎರಡು ವರ್ಷಗಳಿಂದ ನಾಯಿಗಳ ಜತೆ ಬಂಧಿಯಾಗಿದ್ದ 11 ವರ್ಷದ ಬಾಲಕ ನಾಯಿಗಳಂತೆಯೇ ವರ್ತನೆ ಮಾಡುತ್ತಿದ್ದ. ಅದು ಸಹಜವೂ ಬಿಡಿ.
ಇಂತಹದೊಂದು ಅಮಾನವೀಯ ಘಟನೆಗೆ ಕಾರಣವಾಗಿದ್ದು ಬೇರಾರು ಅಲ್ಲ ಬಾಲಕನ ತಂದೆ ತಾಯಿಗಳೇ ಆಗಿದ್ದಾರೆ. ಪುಣೆಯ ಕೊಂಡ್ವಾ ಪ್ರದೇಶದ ಕೃಷ್ಣಾಯ್ ಕಟ್ಟಡ ಇಂತಹದೊಂದು ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಈ ಘಟನೆ ಬೆಳಕಿಗೆ ಬಂದ ತಕ್ಷಣ, ಸಂತ್ರಸ್ತ ಬಾಲಕನ ಪೋಷಕರ ವಿರುದ್ಧ ಮಕ್ಕಳ ಪಾಲನೆ ಮತ್ತು ರಕ್ಷಣಾ ನ್ಯಾಯ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಕೊಂಡ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ವಿಷಯ: ಸಂತ್ರಸ್ತ ಬಾಲಕ ಮತ್ತು ಅವರ ಪೋಷಕರು ಕೊಂಡ್ವಾದ ಕೃಷ್ಣಾಯ್ ಬಿಲ್ಡಿಂಗ್‌ನಲ್ಲಿರುವ ಒನ್ ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಅದೇ ಮನೆಯಲ್ಲಿ 22 ನಾಯಿಗಳು ಇದ್ದವು. 11 ವರ್ಷದ ಈ ಬಾಲಕನು ಹಲವು ದಿನಗಳಿಂದ ನಾಯಿಗಳೊಂದಿಗೆ ವಾಸವಾಗಿದ್ದ. ನಾಯಿಗಳ ಜತೆಗೆ ಕಾಲ ಕಳೆಯುತ್ತಿದ್ದ ಬಾಲಕ ನಾಯಿಗಳಂತೆಯೇ ವರ್ತನೆ ಮಾಡ ತೊಡಗಿದ್ದ.
ಇನ್ನು ಈ ಬಾಲಕ ಸ್ಥಿತಿ ಚಿಂತಾಜನಕವೂ ಆಗಿತ್ತು. ಕಳೆದ ಎರಡು ವರ್ಷಗಳಿಂದ ಮುಚ್ಚಿದ ಕೋಣೆಯಲ್ಲಿ ನಾಯಿಗಳೊಂದಿಗೆ ವಾಸವಾಗಿದ್ದ ಕಾರಣ, ಬಾಲಕ ನಾಯಿಯಂತೆ ವರ್ತಿಸುತ್ತಿದ್ದನಲ್ಲದೇ, ಸರಿಯಾದ ಪೋಷಣೆಯ ಕೊರತೆಯಿಂದ ಬಾಲಕ ತೀರಾ ಬಲ ಹೀನನಾಗಿದ್ದ. ಅಷ್ಟೇ ಅಲ್ಲ ಈ ಬಾಲಕನ ಮಾನಸಿಕ ಆರೋಗ್ಯವೂ ತೀರಾ ಹದಗೆಟ್ಟಿದೆ.
ಪ್ರಕರಣ ಪತ್ತೆ ಆಗಿದ್ದು ಹೇಗೆ?: 11 ವರ್ಷದ ಬಾಲಕ ನಾಯಿಯೊಂದಿಗೆ ಕೋಣೆಯಲ್ಲಿ ಬಂಧಿಯಾಗಿದ್ದನು. ಆದ್ದರಿಂದ ಹುಡುಗ ಕಿಟಕಿಯ ಬಳಿ ಕುಳಿತು ನಾಯಿಯಂತೆ ವರ್ತಿಸುತ್ತಾನೆ ಎಂಬ ಮಾಹಿತಿ, ಮಕ್ಕಳ ಸಹಾಯವಾಣಿಯ ಸಂಯೋಜಕಿ ಅಪರ್ಣಾ ಮೋದಕ್ ದೂರವಾಣಿ ಮೂಲಕ ಬಂದಿತ್ತು. ಆ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ, 11 ವರ್ಷದ ಬಾಲಕ ಕೋಣೆಯೊಂದರಲ್ಲಿದ್ದು, ಆತನ ಸುತ್ತ 20 ರಿಂದ 22 ನಾಯಿಗಳು ಪತ್ತೆಯಾಗಿದ್ದವು. ಆ ನಂತರ ಅಪರ್ಣಾ ಮೋದಕ ಈ ಸಂಗತಿಯನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದರು.
ತಂದೆ - ತಾಯಿ ವಿರುದ್ಧ ದೂರು: ಮೇಲಿನ ಅಧಿಕಾರಿಗಳ ನಿರ್ದೇಶನದಂತೆ ಕೊಂಡ್ವಾ ಪೊಲೀಸ್ ಠಾಣೆಗೆ ಆಗಮಿಸಿದ ಚೈಲ್ಡ್ ಲೈನ್ ಅಧಿಕಾರಿ ಅಪರ್ಣಾ ವಿವರವಾದ ದೂರು ದಾಖಲಿಸಿದ್ದರು. ಈ ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ, ಬಾಲಕ ನಾಯಿಗಳೊಂದಿಗೆ ಕೋಣೆಯಲ್ಲಿ ಪತ್ತೆಯಾಗಿದ್ದ. ಇದರಿಂದ ಬೆಚ್ಚಿ ಬಿದ್ದ ಪೊಲೀಸರು, ಬಾಲಕನ ತಂದೆ ಮತ್ತು ತಾಯಿ ವಿರುದ್ಧ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2000 ಕಲಂ 23 ಮತ್ತು 28 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾಲಕನಿಗೆ ಕೌನ್ಸೆಲಿಂಗ್: ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿರುವ ಪೊಲೀಸರು, ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಮಗುವನ್ನು ಆ ಮನೆಯಿಂದ ಹೊರತರುವುದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು. ಏಕೆಂದರೆ ಆ ನಾಯಿಗಳೆಲ್ಲ ದಾರಿ ತಪ್ಪಿದ್ದವು. ಇಂತಹ ಅನೈರ್ಮಲ್ಯದ ಸ್ಥಳದಲ್ಲಿ 22 ನಾಯಿಗಳ ಬಳಿ 11 ವರ್ಷದ ಬಾಲಕ ಸಿಕ್ಕಿಬಿದ್ದಿದ್ದ. ಅಂತಿಮವಾಗಿ ಮಗುವನ್ನು ಅಲ್ಲಿಂದ ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ. ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ:'ನಾಗ್ ಔರ್ ನಾಗಿನಿ ಕಿ ಲವ್ ಸ್ಟೋರಿ'... ಲವರ್ಗೋಸ್ಕರ ಪ್ರಾಣಬಿಟ್ಟ ಹಾವು!