ಭೋಪಾಲ್(ಮಧ್ಯಪ್ರದೇಶ): ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಅಥ್ಲೀಟ್‌ವೊಬ್ಬರು ಜೀವನದ ಬಂಡಿ ಸಾಗಿಸಲು ಐಸ್‌ಕ್ರೀಂ ಮಾರಾಟ ಮಾಡ್ತಿದ್ದಾರೆ. ಇದರಿಂದ ಬರುವ ಆದಾಯದಿಂದ ಮನೆಯ ಖರ್ಚುವೆಚ್ಚವನ್ನು ನಿಭಾಯಿಸುತ್ತಿದ್ದಾರೆ.
21 ವರ್ಷದ ಸಚಿನ್ ಸಾಹು ಪ್ಯಾರಾ ಅಥ್ಲೀಟ್ ಆಗಿದ್ದು, ಮಧ್ಯಪ್ರದೇಶದ ರೇವಾದಲ್ಲಿ ವಾಸವಿದ್ದಾರೆ. ಕ್ರೀಡಾಭ್ಯಾಸ ಮಾಡಲು ಶೂ ಇಲ್ಲದ ಕಾರಣಕ್ಕೆ ಬರಿಗಾಲಿನಲ್ಲೇ ಓಡಿ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಎರಡು ಕಂಚಿನ ಪದಕವನ್ನು ಇವರು ಮುಡಿಗೇರಿಸಿಕೊಂಡಿದ್ದರು.
2015ರಿಂದ 2019ರವರೆಗೆ ಕ್ರಿಕೆಟ್ ಆಡಿರುವ ಸಚಿನ್ ಸಾಹು ದಿವ್ಯಾಂಗನಾಗಿದ್ದ ಕಾರಣ ಹೆಚ್ಚಿನ ಸಾಧನೆ ಸಾಧ್ಯವಾಗಲಿಲ್ಲ. ತದನಂತರ ಗ್ವಾಲಿಯರ್ನ ಅಥ್ಲೆಟಿಕ್ಸ್ ಕೋಚ್ ಬಿ.ಕೆ.ಧವನ್ ಅವರನ್ನು ಸಂಪರ್ಕಿಸಿ ತರಬೇತಿ ಪಡೆದುಕೊಂಡರು. ಸತತ ತರಬೇತಿ ಹಾಗೂ ಪ್ರಯತ್ನದ ಫಲವಾಗಿ ಸಚಿನ್, 2020ರ ನ್ಯಾಷನಲ್ ಚಾಂಪಿಯನ್ಶಿಪ್ಗೆ ಅರ್ಹತೆ ಗಿಟ್ಟಿಸಿಕೊಂಡರು. ಆದರೆ, ಕೋವಿಡ್ನಿಂದಾಗಿ ಸ್ಪರ್ಧೆ ಸ್ಥಗಿತಗೊಂಡಿತು. 2021ರಲ್ಲಿ ನಡೆದ ಸ್ಪರ್ಧೆಯಲ್ಲಿ 100 ಮೀಟರ್ ಓಟದಲ್ಲಿ 4ನೇ ಸ್ಥಾನ ಪಡೆದರು. ಒಡಿಶಾದ ಭುವನೇಶ್ವರದಲ್ಲಿ ನಡೆದ 20ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಇವರ ಪರಿಶ್ರಮಕ್ಕೆ ಎರಡು ಕಂಚಿನ ಪದಕ ಒಲಿದುಬಂತು.
ಇದನ್ನೂ ಓದಿ: IPLನಲ್ಲಿಂದು ಗುಜರಾತ್ ಸವಾಲು ಎದುರಿಸಲಿದೆ ಮುಂಬೈ: ಅರ್ಜುನ್ ತೆಂಡೂಲ್ಕರ್ಗೆ ಚಾನ್ಸ್?
ಕೋವಿಡ್ನಿಂದಾಗಿ ಸಚಿನ್ ಸಾಹುಗೆ ಯಾವುದೇ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಸದ್ಯಕ್ಕೆ ಐಸ್‌ಕ್ರೀಂ ಮಾರುವ ಕೆಲಸ ಮಾಡ್ತಿದ್ದಾರೆ. ಇವರಿಗೆ ನಾಲ್ವರು ಸಹೋದರಿಯರು, ಇಬ್ಬರು ಸಹೋದರರಿದ್ದಾರೆ.