ನವದೆಹಲಿ: ಜುಲೈ 1 ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ 492 ಸಂವಿಧಾನ ಪೀಠದಿಂದ ನಡೆಯಬೇಕಿರುವ ವಿಚಾರಣೆಗಳು ಸೇರಿದಂತೆ ಒಟ್ಟು 70,062 ಪ್ರಕರಣಗಳು ಬಾಕಿ ಉಳಿದಿವೆ. ಕಳೆದ ಆರು ತಿಂಗಳಲ್ಲಿ, ಪ್ರಕರಣಗಳ ಬಾಕಿಯು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಬಾಕಿ ಪ್ರಕರಣಗಳ ಸಂಖ್ಯೆ 70,000 ಕ್ಕಿಂತ ಹೆಚ್ಚಿದೆ. ಸಂವಿಧಾನ ಪೀಠ ವಿಚಾರಣೆ ನಡೆಸಬೇಕಿರುವ ಪ್ರಕರಣಗಳ ಸಂಖ್ಯೆ ಜನವರಿಯಲ್ಲಿ 422 ಇದ್ದಿದ್ದು, ಜುಲೈನಲ್ಲಿ 492 ಕ್ಕೆ ಏರಿದೆ. ಕಾನೂನಿಗೆ ಸಂಬಂಧಿಸಿದ ವಿಷಯಗಳು ಸಂವಿಧಾನ ಪೀಠ ವಿಚಾರಣೆಯ ವಿಷಯಗಳಾಗಿವೆ.
ಬಾಕಿ ಉಳಿದಿರುವ ಇಷ್ಟು ದೊಡ್ಡ ಪ್ರಮಾಣದ ಪ್ರಕರಣಗಳ ಕುರಿತು ಈಟಿವಿ ಭಾರತನೊಂದಿಗೆ ಮಾತನಾಡಿದ ಸುಪ್ರೀಂ ಕೋರ್ಟ್ ವಕೀಲ ಆದಿತ್ಯ ಪರೋಲಿಯಾ, ದೇಶದ ಎಲ್ಲ ಭಾಗಗಳಿಂದ ಮತ್ತು ಪ್ರತಿಯೊಂದು ನ್ಯಾಯಾಲಯದ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಬರುತ್ತವೆ. ಪ್ರತಿಯೊಬ್ಬರೂ ಸುಪ್ರೀಂ ಕೋರ್ಟ್‌ಗೆ ಬರಲು ಬಯಸುತ್ತಾರೆ. ಪ್ರತಿದಿನ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಮತ್ತು ಪ್ರತಿ ಪ್ರಕರಣದ ವಿಚಾರಣೆಗೆ ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡುವ ಮಾರ್ಗವಾಗಿ ಪರ್ಯಾಯ ವಿವಾದ ಪರಿಹಾರ (ಎಡಿಆರ್) ವಿಧಾನದ ಬಗ್ಗೆ ಆಗಾಗ್ಗೆ ಹೇಳುತ್ತಿರುತ್ತಾರೆ. ಆದರೆ ಭಾರತದ ಜನ ಮಾತುಕತೆ ನಡೆಸಲು ಸಿದ್ಧರಿಲ್ಲ ಮತ್ತು ಅವರು ನ್ಯಾಯಾಲಯಕ್ಕೇ ಹೋಗಲು ಬಯಸುತ್ತಾರೆ. ಹೀಗಾಗಿ ಎಡಿಆರ್ ವಿಧಾನ ಭಾರತದಲ್ಲಿ ಹೆಚ್ಚು ಪರಿಣಾಮಕಾರಿಯಾಗದಿರಬಹುದು ಎಂದು ಪರೋಲಿಯಾ ಹೇಳಿದರು.
ಇತರ ದೇಶಗಳಲ್ಲಿ ಜನರು ನ್ಯಾಯಾಲಯದಿಂದ ದೂರವಿರಲು ಪ್ರಯತ್ನಿಸುತ್ತಾರೆ, ಆದರೆ ಭಾರತದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ನಾನು ಅದೆಷ್ಟೊಂದು ಸಮಯದಿಂದ ಹೋರಾಟ ನಡೆಸುತ್ತಿದ್ದೇನೆ. ಹೀಗಿರುವಾಗ ಮಾತುಕತೆಗೆ ಏಕೆ ಮುಂದಾಗಬೇಕು? ಏನೇ ಆದರೂ ಕೋರ್ಟ್ನಲ್ಲೇ ನಿರ್ಧಾರವಾಗಲಿ ಎಂಬುದು ಭಾರತೀಯರ ಮನಸ್ಥಿತಿಯಾಗಿದೆ. ಇನ್ನು ಎಡಿಆರ್ ಸಂದರ್ಭದಲ್ಲಿ ಮಧ್ಯವರ್ತಿಗಳಿಗೆ ಯೋಗ್ಯ ವೇತನದ ಪ್ರಮಾಣವೂ ಒಂದು ಸಮಸ್ಯೆಯಾಗಿದೆ ಎನ್ನುತ್ತಾರೆ ವಕೀಲ ಪರೋಲಿಯಾ.
ಎಡಿಆರ್ ವಿಧಾನದಲ್ಲಿ ಪಕ್ಷಗಾರರೇ ಮಧ್ಯವರ್ತಿಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಅನುಭವಕ್ಕನುಗುಣವಾಗಿ ಅವರಿಗೆ ಶುಲ್ಕ ಸಿಗುವುದಿಲ್ಲವಾದ್ದರಿಂದ ಮಧ್ಯಸ್ಥಿಕೆ ವಹಿಸಲು ಅವರು ಮುಂದೆ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಕೋರ್ಟ್ ಹಾಗೂ ನ್ಯಾಯಮಂಡಳಿಗಳಿಗೆ ನ್ಯಾಯಾಧೀಶರನ್ನು ನೇಮಿಸುತ್ತಿಲ್ಲ. ಇದೂ ಕೂಡ ಬಹಳ ದೊಡ್ಡ ಅಡಚಣೆಯಾಗಿದೆ ಎಂದು ಪರೋಲಿಯಾ ಹೇಳಿದರು.
"ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಖಂಡಿತವಾಗಿಯೂ ಈಗ ಆಗಬೇಕಾದ ಕೆಲಸ. ಎರಡನೆಯದಾಗಿ, ಮೇಲ್ಮನವಿ ನ್ಯಾಯಾಲಯದ ವಿಧಾನವನ್ನು ಪರಿಚಯಿಸಬೇಕಿದೆ, ಆಗ ಮಾತ್ರ ಏನಾದರೂ ಬದಲಾವಣೆಯಾಗಬಹುದು. ಈಗಾಗಲೇ ನಿರ್ದಿಷ್ಟ ಕುಂದುಕೊರತೆಗಳಿಗಾಗಿ NCLAT ನಂತಹ ನ್ಯಾಯಮಂಡಳಿಗಳನ್ನು ರಚಿಸಿದ್ದೇವೆ. ಆದರೆ ನ್ಯಾಯಾಧೀಶರ ನೇಮಕಾತಿ ಆಗದ ಕಾರಣದಿಂದ ಇವು ಅಷ್ಟೊಂದು ಸಹಾಯಕವಾಗುತ್ತಿಲ್ಲ.” ಎಂದು ಪರೋಲಿಯಾ ತಿಳಿಸಿದರು.