ಛತ್ತರ್ಪುರ(ಮಧ್ಯಪ್ರದೇಶ): ಆಟವಾಡುತ್ತಿದ್ದ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ದಿವ್ಯಾಂಶಿ ಸಾವು ಗೆದ್ದು ಹೊರಬಂದಿದ್ದಾಳೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಆಕೆಯನ್ನ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಲುಗಾಸಿ ಔಟ್ಪೋಸ್ಟ್ನ ದೌನಿ ಗ್ರಾಮದಲ್ಲಿ ಒಂದು ವರ್ಷದ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಈ ವೇಳೆ ಆಕೆಯ ಅಳುವ ಶಬ್ಧ ಕೇಳಿರುವ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಸುನೀತಾ, ನೌಗಾಂವ್ ಠಾಣೆ ಪ್ರಭಾರಿ ದೀಪಕ್ ಯಾದವ್, ಜಿಲ್ಲಾಧಿಕಾರಿ ಸಂದೀಪ್ ಜಿಆರ್ ಸೇರಿದಂತೆ ಅನೇಕರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.
ಮಗು ತೆರೆದ ಕೊಳವೆ ಬಾವಿಯಲ್ಲಿ 15 ಅಡಿ ಆಳದಲ್ಲಿ ಸಿಲುಕಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಿದ್ದಾರೆ. ಜೊತೆಗೆ ಸೇನಾ ಸಿಬ್ಬಂದಿ ಜೊತೆ ಭರದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪೊಲೀಸರು ಬಾಲಕಿಯನ್ನ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಇದನ್ನೂ ಓದಿರಿ: ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ಹೊರತೆಗೆದ ಹೈದರಾಬಾದ್ ವೈದ್ಯರು
ಒಳಗಿನಿಂದ ಅಳುವ ಸದ್ದು: ಬಾಲಕಿ ಆಟವಾಡುತ್ತಾ ಎಲ್ಲೋ ಇದ್ದಾಳೆ ಎಂದು ಪೋಷಕರು ತಿಳಿದಿದ್ದರು. ತುಂಬಾ ಹೊತ್ತಾದರೂ ಬಾರದ ಕಾರಣ ಹುಡುಕಾಟ ಆರಂಭಿಸಿದಾಗ ಗದ್ದೆಯ ಬೋರ್‌ನಿಂದ ದಿವ್ಯಾಂಶಿ ಆಳುವ ಶಬ್ಧ ಕೇಳಿದೆ. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಮೊದಲು ಆಕೆ ಹೊರತರಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕಿ ಬಿದ್ದಿರುವ ಬೋರ್ವೆಲ್ನ ಆಳ 15 ಅಡಿ ಇದೆ ಎಂದು ತಿಳಿದು ಬಂದಿತ್ತು. ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಜಿಲ್ಲಾಡಳಿತ ಇದೀಗ ಅದರಲ್ಲಿ ಯಶಸ್ವಿಯಾಗಿದೆ.