ಜಾಲ್ವಾರ್(ರಾಜಸ್ಥಾನ): ಇಂದು ವಿಶ್ವ ತಾಯಂದಿರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗ್ತಿದೆ. ಅಮ್ಮನ ತ್ಯಾಗ, ಸೇವೆ ಮತ್ತು ಆಕೆಯ ಸಮರ್ಪಣೆ ಭಾವದ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಆದರೆ ಈ ತಾಯಂದಿರ ದಿನವೇ ಜಾಲ್ವಾರ್ದ ಸುನೆಲ್ ಪಟ್ಟಣದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.
ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆ ಮಾಡಿರುವ ಎಡವಟ್ಟಿನಿಂದ ಪುತ್ರರಿಬ್ಬರು ಕೋವಿಡ್ನಿಂದ ಸಾವನ್ನಪ್ಪಿರುವ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ಸಾಗಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಅಂತ್ಯ ಸಂಸ್ಕಾರಕ್ಕೂ ಸಹ ಹೆಗಲು ನೀಡದಿದ್ದಾಗ ಮಕ್ಕಳೇ ತಳ್ಳೋ ಗಾಡಿಯಲ್ಲಿ ಮೃತದೇಹ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ಸಿಗದ ಆ್ಯಂಬುಲೆನ್ಸ್: ಬಂಡಿ ಮೇಲೆ ಮಹಿಳೆ ಶವ ಸಾಗಿಸಿದ ಕುಟುಂಬ
ಅಲ್ಲಿನ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಇಬ್ಬರು ಪುತ್ರರು ತಮ್ಮ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ತೆಗೆದುಕೊಂಡು ಹೋಗಿ, ಅಂತಿಮ ವಿಧಿ-ವಿಧಾನ ನಡೆಸಿದ್ದಾರೆ. ಕೊರೊನಾ ಸೋಂಕಿನಿಂದ ಮಹಿಳೆ ಸಾವನ್ನಪ್ಪಿದ್ದು, ಕೋವಿಡ್ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಜಿಲ್ಲಾಡಳಿತ ಆ್ಯಂಬುಲೆನ್ಸ್ ನೀಡಿಲ್ಲ. ಹೀಗಾಗಿ ಇಬ್ಬರು ಪುತ್ರರು ತಾಯಿಯ ಶವವನ್ನ ಗಾಡಿಯಲ್ಲಿಟ್ಟುಕೊಂಡು ಪಟ್ಟಣದ ಮಾರುಕಟ್ಟೆ ಮತ್ತು ಬೀದಿಗಳ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಅಂತ್ಯಕ್ರಿಯೆ ಮುಗಿಸಿದ್ದಾರೆ. ಅವರಿಗೆ ಸ್ಥಳೀಯರು ಯಾರೂ ಕೂಡ ಸಹಾಯ ಮಾಡದಿರುವುದು ಮನುಷತ್ವವನ್ನು ಪ್ರಶ್ನಿಸುವಂತಾಗಿದೆ.
ಕೋವಿಡ್ನಿಂದ ಸಾವನ್ನಪ್ಪಿರುವ ತಾಯಿಯ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಆ್ಯಂಬುಲೆನ್ಸ್ ನೀಡದ ಕಾರಣ ವಿಧಿಯಿಲ್ಲದೆ ಈ ರೀತಿಯಾಗಿ ಮಾಡಿದ್ದೇವೆ ಎಂದು ಮೃತ ಅಪರ್ಣಾ ಅವರ ಮಗ ದಿನೇಶ್ ಕುಮಾರ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.