ನಬರಂಗಪುರ (ಒಡಿಶಾ): ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಅನೇಕ ಪ್ರತಿಭೆಗಳು ಹೊರಹೊಮ್ಮಿದ್ದಾರೆ. ತಮ್ಮ ಪ್ರತಿಭೆ ಮತ್ತು ತಮ್ಮನ್ನು ತಾವು ತೋರ್ಪಡಿಸಿಕೊಳ್ಳಲು ಮುಕ್ತ ವೇದಿಕೆ ಇದಾಗಿದೆ. ಹೀಗಾಗಿ ಹಲವರು ಕೆಲ ದಿನಗಳಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ. ಇಂತಹದ್ದೇ ಸೆನ್ಸೇಷನ್ ಅನ್ನು ಒಡಿಶಾದ ಯುವಕನೊಬ್ಬ ಮಾಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಈ ಯುವಕ ಇಂಗ್-ಫ್ಲುಯೆನ್ಸರ್ (Eng-Fluencer) ಎಂಬ ಪರಿಕಲ್ಪನೆಯನ್ನೂ ಹುಟ್ಟುಹಾಕಿದ್ದಾರೆ.
ಹೌದು, 21 ವರ್ಷದ ಧೀರಜ್ ಟಕ್ರಿ ಎಂಬ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಇಂಗ್ಲಿಷ್ ಕಲೆಯ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ವಿದೇಶಕ್ಕೆ ಹೋಗದೆ ಅಲ್ಲಿನ ಸ್ಥಳೀಯರಂತೆ ಇಂಗ್ಲಿಷ್ ಮಾತನಾಡುವ ಕಲೆಯನ್ನು ಇವರು ಹೇಳಿಕೊಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯಯಾಗಿರುವ ಜನರು ಈಗಾಗಲೇ ಧೀರಜ್ ವಿಡಿಯೋಗಳನ್ನೂ ನೋಡಿರಬಹುದು.
ಇಂಗ್ಲಿಷ್ ಮಾತನಾಡುವ ಕಲೆಯ ಕುರಿತು ಧೀರಜ್ ಇದುವರೆಗೆ ಹಲವು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷ ಫಾಲೋವರ್ಸ್ ಹೊಂದಿರುವ ಧೀರಜ್ ಯಾವಾಗಲೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಿನ ವಿಡಿಯೋಗಳು ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ.
ಧೀರಜ್ ಟಕ್ರಿ ಯಾರು?: ನಬರಂಗಪುರ ಜಿಲ್ಲೆಯ ಈ ಧೀರಜ್ ಟಕ್ರಿ 12ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಇವರ ತಂದೆ ನರೇಶ್ ಚಂದ್ರ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿದ್ದಾರೆ. ಆದರೆ, ಹೊಸದಾಗಿ ಏನಾದರೂ ಮಾಡಬೇಕು ಎಂಬ ಆಲೋಚನೆಯನ್ನು ಧೀರಜ್ ಹೊಂದಿದ್ದರು. ಬಳಿಕ 2019ರಲ್ಲಿ ಧೀರಜ್ ವಿವಿಧ ರೀತಿಯ ಇಂಗ್ಲಿಷ್ ಪುಸ್ತಕಗಳನ್ನು ಓದಲು ಶುರು ಮಾಡಿದ್ದರು. ಅಲ್ಲದೇ, ಯೂಟ್ಯೂಬ್‌ನಿಂದಲೂ ಇಂಗ್ಲಿಷ್ ಕಲಿಯಲು ಆರಂಭಿಸಿದ್ದರು.
ಇದಾದ ಒಂದು ವರ್ಷದಲ್ಲೇ ಎಂದರೆ, 2020ರಲ್ಲಿ ಅಮೆರಿಕನ್ ಇಂಗ್ಲಿಷ್ ಕಲಿಯಲು ಆಸಕ್ತಿ ತೋರಿಸಿದ್ದರು. ಯೂಟ್ಯೂಬ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಇಂಗ್ಲಿಷ್ ತರಗತಿಗಳನ್ನು ಪಡೆಯಲು ಪ್ರಾರಂಭಿಸಿದ್ದರು. ಇದೀಗ ಅಮೆರಿಕನ್ ಇಂಗ್ಲಿಷ್ ಕಲಿತಿರುವ ಧೀರಜ್, ಇಂಗ್ಲಿಷ್ ಭಾಷೆಯನ್ನು ಹೇಗೆ ಮಾತನಾಡಬೇಕೆಂಬ ವಿಡಿಯೋಗಳನ್ನು ಮಾಡುತ್ತಿದ್ದಾರೆ. ವಿದೇಶಿಗರ ಇಂಗ್ಲಿಷ್ ಅನ್ನು ಹೇಗೆ ಉಚ್ಚರಿಸಬೇಕು ಎಂಬ ಕುರಿತು ತಮ್ಮದೇ ಆದ ವಿಡಿಯೋವನ್ನು ರೆಕಾರ್ಡ್ ಮಾಡುತ್ತಾರೆ. ಇವುಗಳನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ.
ಧೀರಾಜ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ವಿವರಿಸಿದಂತೆ ವಿದೇಶಕ್ಕೆ ಹೋಗದೇ ಸ್ಥಳೀಯರಂತೆ ಇಂಗ್ಲಿಷ್ ಮಾತನಾಡುವ ಕಲೆಯನ್ನು ಕಲಿಸುತ್ತಾರೆ. 2023ರ ಸೆಪ್ಟೆಂಬರ್ 7ರ ಹೊತ್ತಿಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 165 ಫಾಲೋವರ್ಸ್ ಹೊಂದಿದ್ದರು. ಆದರೆ, ಕೆಲ ದಿನಗಳಲ್ಲೇ ಜನರಿಗೆ ಧೀರಜ್ ಇಂಗ್ಲಿಷ್ ಕಲಿಸುವ ಪರಿಕಲ್ಪನೆಯು ವ್ಯಾಪಕವಾಗಿ ಇಷ್ಟವಾಗ ತೊಡಗಿದೆ. ಇದರಿಂದ ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್ ಸಂಖ್ಯೆ 9 ಲಕ್ಷಕ್ಕೆ ಏರಿಕೆಯಾಗಿದೆ. ಇದಲ್ಲದೇ ವಿದೇಶದಲ್ಲಿಯೂ ಇವರಿಗೆ ಅನೇಕ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ: 16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕನಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಬೈಕ್ ಗಿಫ್ಟ್