ಬೆಂಗಳೂರು: ಟ್ರಕ್ಕಿಂಗ್ ಟ್ರೌಸರ್ ಖರೀದಿಗೆ ಆನ್ಲೈನ್ನಲ್ಲಿ ಹಣ ಪಾವತಿಸಿದ ಬಳಿಕವೂ ತಲುಪಿಸದೇ ಸೇವಾ ನ್ಯೂನತೆ ಎಸಗಿರುವ ಕ್ರೀಡಾ ಪರಿಕರಗಳ ಮಳಿಗೆ ಡೆಕಾಥ್ಲಾನ್ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 35 ಸಾವಿರ ರೂ.ಗಳ ದಂಡ ವಿಧಿಸಿದೆ. ಅಲ್ಲದೆ, ಗ್ರಾಹಕರು ಈಗಾಗಲೇ ಪಾವತಿ ಮಾಡಿರುವ 1,399 ರೂ.ಗಳಿಗೆ ಶೇ.9ರಷ್ಟು ವಾರ್ಷಿಕ ಬಡ್ಡಿ, ಸೇವಾ ನ್ಯೂನತೆಗಾಗಿ 25 ಸಾವಿರ ರೂ ಮತ್ತು ಪ್ರಕರಣದ ಕಾನೂನು ಹೋರಾಟ ನಡೆಸಿದ ಪರಿಣಾಮ 10 ಸಾವಿರ ರೂ.ಗಳ ದಂಡ ವಿಧಿಸಿದ್ದು, ಈ ಮೊತ್ತವನ್ನು ಪರಿಹಾರವಾಗಿ ದೂರುದಾರರಿಗೆ ಪಾವತಿ ಮಾಡುವಂತೆ ಸೂಚಿಸಿದೆ.
ಮಂಗಳೂರಿನ ಸೋಮೇಶ್ವರದ ನಿವಾಸಿ ಮೋಹಿತ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ(ಪ್ರಭಾರ) ಸೋಮಶೇಖರಪ್ಪ ಹಂದಿಗೋಳ ಮತ್ತು ಸದಸ್ಯರಾದ ಎಚ್.ಜಿ.ಶಾರದಮ್ಮ ಅವರಿದ್ದ ಪೀಠ ಈ ಆದೇಶ ಹೊರಹಾಕಿತು. ಆದೇಶ ಉಲ್ಲಂಘಿಸಿದಲ್ಲಿ ಮಳಿಗೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂದು ಇದೇ ವೇಳೆ ಎಚ್ಚರಿಸಿದೆ.
ದೂರುದಾರರು ಡೆಕಾಥ್ಲಾನ್ನ ಪ್ರತಿನಿಧಿಗಳ ಭರವಸೆಯಂತೆ ಫ್ರೋಕ್ಲಾಜ್ ಟ್ರಕ್ಕಿಂಗ್ ಟ್ರೌಸರ್ ಅನ್ನು ಆನ್‌ಲೈನ್ ಮೂಲಕ ಖರೀದಿಗಾಗಿ 1,399 ರೂ ಪಾವತಿಸಿ ರಸೀದಿ ಪಡೆದುಕೊಂಡಿದ್ದರು. ಆದರೆ, ಹಣ ಪಾವತಿ ಮಾಡಿ ಹಲವು ದಿನಗಳು ಕಳೆದರೂ, ತಲುಪಿಸಲಿಲ್ಲ.
ಇದಾದ ಬಳಿಕ ನಗರದಲ್ಲಿರುವ ಇಟಿಎ ಮಾಲ್‌ನ ಡೆಕಾಥ್ಲಾನ್ಗೆ ಇಮೇಲ್ ಮಾಡಿ ಹಲವು ಬಾರಿ ಮನವಿ ಮಾಡಿದ್ದರೂ ಹಣ ಹಿಂದಿರುಗಿಸಿರಲಿಲ್ಲ. ಹೀಗಾಗಿ ದೂರುದಾರರು ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ನೋಟಿಸ್ ತಲುಪದೆ ಮತ್ತೆ ದೂರುದಾರರಿಗೆ ಹಿಂದಿರುಗಿದೆ.
ಈ ಪ್ರಕ್ರಿಯೆಯಿಂದ ಮಾನಸಿಕ ಹಾಗೂ ಆರ್ಥಿಕವಾಗಿ ನಷ್ಟ ಅನುಭವಿಸಿದ್ದ ದೂರುದಾರರು ಗ್ರಾಹಕರ ಸಂರಕ್ಷಣಾ ಅಧಿನಿಯಮ 2019ರ ಕಲಂ 35ರ ಅಡಿಯಲ್ಲಿ ದೂರು ಸಲ್ಲಿಸಿ, ಈಗಾಗಲೇ ಪಾವತಿಸಿರುವ 1399 ರೂ ಹಾಗೂ ಸೇವಾ ನ್ಯೂನತೆಗಾಗಿ 10 ಸಾವಿರ ರೂ, ಮಾನಸಿಕ ಹಿಂಸೆ ನೀಡಿದ ಪರಿಣಾಮ 10 ಸಾವಿರ ರೂ.ಗಳನ್ನು ವಾರ್ಷಿಕ ಶೇ.18ರ ಬಡ್ಡಿ ಸೇರಿಸಿ ಪಾವತಿ ಮಾಡಬೇಕು ಎಂದು ಕೋರಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: 'ಅಪಘಾತ ನಡೆದಾಗ ವಾಹನಕ್ಕೆ ಪರವಾನಗಿ ಇಲ್ಲದಿದ್ದರೂ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು'