ಭುವನೇಶ್ವರ : ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸ್ಥಿರಾಸ್ತಿ, ಚರಾಸ್ತಿ ಸೇರಿ ಒಟ್ಟು 64.98 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಕರೆ ನೀಡಿರುವ ಸಿಎಂ, ತಮ್ಮ ಆಸ್ತಿಯ ವಿವಿರಗಳನ್ನು ಪ್ರಕಟಿಸಿದ್ದಾರೆ.
ಸ್ಥಿರಾಸ್ತಿ : ಫರಿದಾಬಾದ್‌ನ ಟಿಕ್ರಿ ಖೇರಾ ಗ್ರಾಮದಲ್ಲಿ 10 ಕೋಟಿ ರೂ. ಮೌಲ್ಯದ 22.7 ಎಕರೆ ಕೃಷಿಭೂಮಿ ಮತ್ತು ಕಟ್ಟಡವನ್ನು ಹೊಂದಿದ್ದಾರೆ. ಪಟ್ನಾಯಕ್, ತಮ್ಮ ಪೂರ್ವಜರ ಆಸ್ತಿಯಲ್ಲಿ ಶೇ. 50ರಷ್ಟು ಪಾಲನ್ನು ನವದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಹೊಂದಿದ್ದು, ಇದರ ಮೌಲ್ಯ 43 ಕೋಟಿ ರೂ. ಆಗಿದೆ. ಭುವನೇಶ್ವರ ವಿಮಾನ ನಿಲ್ದಾಣದ ಸಮೀಪ ತಮ್ಮ ತಾಯಿಯಿಂದ ಪಡೆದ 9.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಚರಾಸ್ತಿ : ಒಡಿಶಾದ ಗಂಜಮ್, ಭುವನೇಶ್ವರ ಜಿಲ್ಲೆ, ನವದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಏಳು ಬ್ಯಾಂಕ್ ಖಾತೆಗಳನ್ನು ಪಟ್ನಾಯಕ್ ಹೊಂದಿದ್ದು, ಈ ಚರಾಸ್ತಿಯ ಮೌಲ್ಯ 1.34 ಕೋಟಿ ರೂ.ಆಗಿದೆ. ₹64.98 ಕೋಟಿಯಲ್ಲಿ ಸ್ಥಿರಾಸ್ತಿ ಬಿಟ್ಟು ಉಳಿದ ಹಣ ಚರಾಸ್ತಿಯಾಗಿದ್ದು, ಇದರ ಮಾಹಿತಿಗಳನ್ನು ಸಿಎಂ ನೀಡಿದ್ದಾರೆ.