ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ವಾಯುಯಾನ ಉದ್ಯಮ ಗಮನಾರ್ಹ ಬೆಳವಣಿಗೆ ಕಂಡಿದೆ. ಈ ಅವಧಿಯಲ್ಲಿ ದೇಶದಲ್ಲಿ ಕಾರ್ಯಾಚರಣೆಯಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆಯು ದ್ವಿಗುಣಗೊಂಡಿದೆ. 2014 ರಲ್ಲಿ 74 ಇದ್ದುದು 2023 ರಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯು 148 ಕ್ಕೇರಿದೆ. ಒಟ್ಟಾರೆ ವಿಮಾನ ನಿಲ್ದಾಣಗಳು ಮತ್ತು ವಾಯುಯಾನ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರದ ನಿರಂತರ ಪ್ರಯತ್ನಗಳ ಕಾರಣದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಪ್ರಾದೇಶಿಕ ಸಂಪರ್ಕ ಯೋಜನೆಯಾಗಿರುವ ಉಡೆ ದೇಶ್ ಕಾ ಆಮ್ ನಾಗರಿಕ್ (RCS- UDAN) ಯೋಜನೆಯು ಅಂತಹ ಒಂದು ಉಪಕ್ರಮವಾಗಿದೆ. ಇದರ ಅಡಿಯಲ್ಲಿ 74 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ 469 ಮಾರ್ಗಗಳಲ್ಲಿ ವಿಮಾನಸಂಚಾರ ಆರಂಭಿಸಲಾಗಿದೆ. ಇದರಿಂದ ಲಕ್ಷಾಂತರ ಭಾರತೀಯರು ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ ಮಾಡಬಹುದಾಗಿದೆ. ಉಡಾನ್ ಯೋಜನೆಯು ಇತ್ತೀಚೆಗೆ ಐದು ವರ್ಷಗಳನ್ನು ಪೂರೈಸಿದೆ. ಸಾಮಾನ್ಯ ನಾಗರಿಕರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶದಿಂದ ವರ್ಧಿತ ವಾಯುಯಾನ ಮೂಲಸೌಕರ್ಯ ಮತ್ತು ವಾಯು ಸಂಪರ್ಕದೊಂದಿಗೆ ಈ ಯೋಜನೆಯನ್ನು ಅಕ್ಟೋಬರ್ 2016 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಶ್ರೇಣಿ II ಮತ್ತು ಶ್ರೇಣಿ III ನಗರಗಳಲ್ಲಿ ಕಾರ್ಯಗತಗೊಳಿಸಲಾಗಿದೆ.
ಸೇವೆಯಲ್ಲಿ ಇಲ್ಲದ ಮತ್ತು ಕಡಿಮೆ ಸೇವೆ ಸಲ್ಲಿಸುವ 100 ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಗಾಗಿ ಸೇವೆ ಸಲ್ಲಿಸದ ಮತ್ತು ಕಡಿಮೆ ಸೇವೆ ಸಲ್ಲಿಸಿದ ವಿಮಾನ ನಿಲ್ದಾಣಗಳ ಪುನರುಜ್ಜೀವನ (Revival of unserved and under served airports) ಯೋಜನೆಯನ್ನು ಸರ್ಕಾರ ಅನುಮೋದಿಸಿದೆ. ಸುಸ್ಥಿರತೆಯ ಕಡೆಗೆ ನಿರಂತರ ಪ್ರಯತ್ನಗಳಿಂದ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಏತನ್ಮಧ್ಯೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (AAI) 2024 ರ ವೇಳೆಗೆ ತನ್ನ ಉಳಿದ ಎಲ್ಲ ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿಗೆ ಶೇಕಡಾ 100 ರಷ್ಟು ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಬಳಸುವ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಇದು ಅಭಿವೃದ್ಧಿಯತ್ತ ಬದ್ಧತೆಯನ್ನು ತೋರಿಸುತ್ತದೆ ಎಂದು ಸರ್ಕಾರ ಹೇಳಿದೆ. ಭಾರತದಲ್ಲಿ ಸ್ವಚ್ಛ, ಹೆಚ್ಚು ಪರಿಣಾಮಕಾರಿ ಮತ್ತು ಸಮೃದ್ಧವಾದ ವಾಯುಯಾನ ಉದ್ಯಮವನ್ನು ಉತ್ತೇಜಿಸುವ ಮೂಲಕ ಉದ್ಯಮವು ಸುಸ್ಥಿರವಾಗಿ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.
UDAN ಇದು ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ. UDAN ನ ಪೂರ್ಣ ರೂಪವು ‘ಉಡೇ ದೇಶ್ ಕಾ ಆಮ್ ನಾಗರಿಕ್’ ಆಗಿದೆ. ಸಾಮಾನ್ಯ ನಾಗರಿಕರಿಗೆ ಕಡಿಮೆ ದರದಲ್ಲಿ ವಾಯುಯಾನ ಸೇವೆ ನೀಡಲು ಸಣ್ಣ ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದು ಜೂನ್ 2016 ರಿಂದ ಜಾರಿಗೊಳಿಸಲಾದ ಹೊಸ ನೀತಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : ಕಚ್ಚಾ ತೈಲದ ಹೊಸ ಸರಾಸರಿ ಬೆಲೆ 75 ರಿಂದ 80 ಡಾಲರ್: ವಿಶ್ಲೇಷಣಾ ವರದಿ