ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಜನರ ಜೀವನ, ಆಹಾರ ಶೈಲಿಯಲ್ಲಿ ಬದಲಾವಣೆಗಳು ಆಗಿವೆ. ಅದರಲ್ಲೂ, ಶೈಕ್ಷಣಿಕ ವಿಷಯದಲ್ಲಿ ಅನೇಕ ಬದಲಾವಣೆಗಳು ಉಂಟಾಗಿವೆ. ಮಹಾಮಾರಿ ಸೋಂಕಿನ ಹಾವಳಿ ಸಂದರ್ಭದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳ ಮೊರೆ ಹೋಗಿದ್ದವು. ಇದೀಗ ಸಹಜ ಸ್ಥಿತಿಗೆ ಬರಲುತ್ತಿದ್ದು, ಮತ್ತೆ ಆಫ್ಲೈನ್ ತರಗತಿಗಳು ಆರಂಭವಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಶಾಲಾ ಮತ್ತು ಕಾಲೇಜುಗಳತ್ತ ಹೆಜ್ಜೆ ಇಡುತ್ತಿದ್ದಾರೆ. ಆದರೆ, ಈ ಸಾಂಕ್ರಾಮಿಕದ ಅವಧಿ ನಂತರ ರಾಷ್ಟ್ರ ರಾಜಧಾನಿ ದೆಹಲಿಯ ಹಂಸರಾಜ್ ಕಾಲೇಜಿನ ಹಾಸ್ಟೆಲ್ ಮತ್ತು ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮಾಂಸಾಹಾರವನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಪರ ಮತ್ತು ವಿರೋಧ ಚರ್ಚೆ ಆರಂಭವಾಗಿದೆ. ಇದೇ ವೇಳೆ ಮಾಂಸಾಹಾರ ನಿಲ್ಲಿಸಿರುವುದನ್ನು ಪ್ರಶ್ನಿಸಿ ಯಾವುದೇ ದೂರು ಬಂದಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.
ಕೊರೊನಾ ಸೋಂಕು ಆರಂಭ ಮತ್ತು ಬಳಿಕ ಲಾಕ್ಡೌನ್ ಜಾರಿಯಾದ ಬಳಿಕ ದೆಹಲಿ ವಿಶ್ವವಿದ್ಯಾಲಯವು 2020ರ ಮಾರ್ಚ್ ತಿಂಗಳಲ್ಲಿ ಆಫ್ಲೈನ್ ತರಗತಿಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಶುರು ಮಾಡಿತ್ತು. ಇದಾದ ಸುಮಾರು ಎರಡು ವರ್ಷಗಳ ನಂತರ ಎಂದರೆ 2022ರ ಫೆಬ್ರವರಿ ತಿಂಗಳಲ್ಲಿ ಆಫ್ಲೈನ್ ತರಗತಿಗಳನ್ನು ವಿವಿ ಆರಂಭಿಸಿದೆ. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಹಂಸರಾಜ್ ಕಾಲೇಜು ಸಹ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿಗಳನ್ನು ಶುರು ಮಾಡಿದೆ. ಆದರೆ, ಈ ನಡುವೆ ಕಾಲೇಜಿನ ಹಾಸ್ಟೆಲ್ ಹಾಗೂ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮಾಂಸಾಹಾರ ಖಾದ್ಯಗಳನ್ನು ಸ್ಥಗಿತ ಮಾಡಲಾಗಿದೆ. ಈ ಕ್ರಮವನ್ನು ಕೆಲವು ವಿದ್ಯಾರ್ಥಿಗಳು ಸ್ವಾಗತಿಸಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.
ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಸ್ಥಗಿತಕ್ಕೆ ಕಾರಣವೇನು?: ಕೋವಿಡ್ಕ್ಕಿಂತ ಮೊದಲು ಹಂಸರಾಜ್ ಕಾಲೇಜಿನ ಹಾಸ್ಟೆಲ್ ಮತ್ತು ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಬಡಿಸಲಾಗುತ್ತಿತ್ತು. ಆದರೆ, ಕೋವಿಡ್ ಬಳಿಕ ಆಫ್ಲೈನ್ ತಗರತಿಗಳು ಆರಂಭವಾದ ನಂತರ ಕಾಲೇಜು ಮತ್ತು ಹಾಸ್ಟೆಲ್ಗೆ ಮರಳಿದ ವಿದ್ಯಾರ್ಥಿಗಳು ಹೆಚ್ಚಾಗಿ ಸಸ್ಯಾಹಾರಕ್ಕೆ ಒತ್ತು ನೀಡಿದರು. ಅದರಲ್ಲೂ, ಕ್ಯಾಂಟೀನ್‌ನಲ್ಲಿ ಬಹುಪಾಲು ವಿದ್ಯಾರ್ಥಿಗಳು ಸಸ್ಯಾಹಾರವನ್ನೇ ಸೇವಿಸಲು ಆರಂಭಿಸಿದರು. ಇದನ್ನು ಗಮನಿಸಿಯೇ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನೀಡುವುದನ್ನು ನಿಲ್ಲಸಲಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಸಮಸ್ಯೆ: ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಸ್ಥಗಿತ ಮಾಡಿರುವುದನ್ನು ಕೆಲವು ವಿದ್ಯಾರ್ಥಿಗಳು ಖಂಡಿಸಿದ್ದಾರೆ. ನಮಗೆ ಮೊದಲು ಮಾಂಸಾಹಾರಿ ಆಹಾರ ನೀಡಲಾಗುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಮಾಂಸಾಹಾರ ಮತ್ತು ಮೊಟ್ಟೆಗಳು ನೀಡುವದನ್ನು ನಿಲ್ಲಿಸಲಾಗಿದೆ. ಇದರಿಂದ ಮಾಂಸಾಹಾರ ತಿನ್ನುವ ಅಭ್ಯಾಸವನ್ನು ಹೊಂದಿರುವ ದಕ್ಷಿಣ ಭಾರತದಿಂದ ಬಂದಿರುವ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾಂಸಾಹಾರ ತಿನ್ನಲು ಬಯಸುವ ವಿದ್ಯಾರ್ಥಿಗಳಿಗೆ ಅದನ್ನೇ ನೀಡಬೇಕೆಂದು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಅಭಯ್ ಮೌರ್ಯ ಹೇಳಿದ್ದಾರೆ.
ಮಾಂಸಾಹಾರದಿಂದ ಸಸ್ಯಾಹಾರಿಗಳಿಗೆ ತೊಂದರೆ: ಇದೇ ವೇಳೆ ಮತ್ತೊಬ್ಬ ವಿದ್ಯಾರ್ಥಿ ಸತ್ಯನಾರಾಯಣ, ಮಾಂಸಾಹಾರ ಮತ್ತು ಸಸ್ಯಾಹಾರ ಒಟ್ಟಿಗೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಸಸ್ಯಾಹಾರ ಆಹಾರವನ್ನು ಇಷ್ಟಪಡುತ್ತಾರೆ. ಮಾಂಸಾಹಾರ ಸೇವಿಸುವವರು ಸಸ್ಯಾಹಾರವನ್ನೂ ಸೇವಿಸಬಹುದು. ಆದರೆ, ಸಸ್ಯಾಹಾರಿಗಳು ಸಸ್ಯಾಹಾರವನ್ನು ಮಾತ್ರ ಸೇವಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ವಿವೇಕ್ ಕುಮಾರ್ ಸಹ, ಹಾಸ್ಟೆಲ್‌ನಲ್ಲಿ ಮಾಂಸಾಹಾರ ಸೇವಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಮಾಂಸಾಹಾರ ತಿನ್ನಲು ಬಯಸುವವರು ಹೊರಗೆ ತಿನ್ನಬಹುದು. ಈಗ ಸಸ್ಯಾಹಾರದಿಂದ ಬಹುತೇಕ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಾಂಶುಪಾಲರು ಹೇಳಿದ್ದೇನು?: ಮಾಂಸಾಹಾರ ನಿಲ್ಲಿಸಿರುವ ಬಗ್ಗೆ ವಿದ್ಯಾರ್ಥಿಗಳಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ಹಂಸರಾಜ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮಾ ಪ್ರತಿಕ್ರಿಯಿಸಿ, ಕಾಲೇಜಿನ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನಿಲ್ಲಿಸಿ, ಸಸ್ಯಾಹಾರ ಮಾತ್ರ ನೀಡಲು ಆರಂಭಿಸಿದ್ದೇವೆ. ಈ ನಿರ್ಧಾರದ ವಿರುದ್ಧ ಆಡಳಿತ ಮಂಡಳಿಗೆ ಯಾವುದೇ ವಿದ್ಯಾರ್ಥಿಯೂ ದೂರು ನೀಡಿಲ್ಲ. ಈ ಬಗ್ಗೆ ಯಾರೂ ಕೂಡ ನನ್ನ ಬಳಿಗೆ ಬಂದು ಚರ್ಚಿಸಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ಹಾಸ್ಟೆಲ್‌ನಲ್ಲಿ ಈ ಮೊದಲು ಮಾಂಸಾಹಾರ ನೀಡುವ ಸೌಲಭ್ಯವಿತ್ತು. ಆದರೆ, ಕೋವಿಡ್ ನಮ್ಮ ಜೀವನಶೈಲಿಯನ್ನು ಬದಲಾಯಿಸಿದೆ. ನಮ್ಮ ಆರೋಗ್ಯ ಮತ್ತು ಜೀವನಶೈಲಿಯತ್ತ ಗಮನಹರಿಸಬೇಕೆಂದು ನಾವು ಭಾವಿಸಿದ್ದೇವೆ. ಅಲ್ಲದೇ, ಹಾಸ್ಟೆಲ್‌ನಲ್ಲಿ ಆಹಾರ ವಿತರಣೆ ಸಂಬಂಧ ಪ್ರತ್ಯೇಕವಾದ ಹಾಸ್ಟೆಲ್ ಸಮಿತಿ ಇದೆ. ಮಾಂಸಾಹಾರ ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ವಿದ್ಯಾರ್ಥಿಗಳಿಗೂ ಆ ಸಮಿತಿ ಒಂದು ಮಾತು ಕೇಳಿರುತ್ತದೆ. ತದನಂತರ ಮಾಂಸಾಹಾರ ನೀಡುವುದನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿರುತ್ತದೆ. ಹೆಚ್ಚಿನ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡೇ ಆಡಳಿತ ಮಂಡಳಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ಕಾರಿನಲ್ಲಿ ಲಿಫ್ಟ್ ಪಡೆದು, ಆತನ ಪತ್ನಿಗೆ ಕಿರುಕುಳ ಆರೋಪ: ಎಸಿಪಿ ವಿರುದ್ಧ ಕೇಸ್ ದಾಖಲು