ನವದೆಹಲಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಕುರಿತು ಎರಡು ವಾರದೊಳಗೆ ರಾಷ್ಟ್ರೀಯ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ಅಲ್ಲದೆ, ಸ್ಥಳೀಯ ವಸತಿ ದಾಖಲಾತಿ ಇಲ್ಲ ಎಂಬ ಕಾರಣಕ್ಕೆ ಯಾವುದೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅಥವಾ ಅಗತ್ಯ ಔಷಧಗಳನ್ನು ಪೂರೈಸಲು ಹಿಂಜರಿಯುವಂತಿಲ್ಲ ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್, ಎಲ್. ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಅದೇಶ ನೀಡಿದೆ. ಜೊತೆಗೆ, ಯಾವುದೇ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಯಾಚಿಸಿದರೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗುವುದು ದಬ್ಭಾಳಿಕೆಯಾಗಿದೆ ಎಂದಿದೆ.
ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಯಾಚಿಸುವ ವ್ಯಕ್ತಿಗಳ ಪೋಸ್ಟ್ಗೆ ನಿರ್ಬಂಧ ಹೇರುವುದು, ಅವರ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ದಬ್ಬಾಳಿಕೆಗೆ ಮುಂದಾದರೆ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದಿದೆ.
ಇದನ್ನೂ ಓದಿ: ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಉಸಿರಾಡುತ್ತಿದ್ದ ಮಹಿಳೆ: ಸಂಬಂಧಿಕರ ಪ್ರಜ್ಞೆಯಿಂದ ವೈದ್ಯರ ನಿರ್ಲಕ್ಷ್ಯ ಬಯಲು
ಈ ಆದೇಶ ಪ್ರತಿಯನ್ನು ದೇಶದ ಎಲ್ಲಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳೂ ನೀಡುವಂತೆ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ಸೂಚಿಸಲಾಗಿದೆ ಎಂದು ಭಾನುವಾರ ರಾತ್ರಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ಆದೇಶದಲ್ಲಿ ಕೋರ್ಟ್ ತಿಳಿಸಿದೆ.
ಆಸ್ಪತ್ರೆಗೆ ದಾಖಲಾಗುವ ಕುರಿತು ರಾಷ್ಟ್ರೀಯ ನೀತಿ ರೂಪಿಸುವವರೆಗೆ, ಸ್ಥಳೀಯ ವಸತಿ ದಾಖಲಾತಿ ಇಲ್ಲ ಎಂಬ ಕಾರಣಕ್ಕೆ ಯಾವುದೇ ರೋಗಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ಅಥವಾ ಅವರಿಗೆ ಅಗತ್ಯ ಔಷಧಗಳನ್ನು ಪೂರೈಸಲು ನಿರಾಕರಿಸುವಂತಿಲ್ಲ ಎಂದು ನ್ಯಾ.ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚಿಸಿದೆ. ಮೇ 3 ರ ಮಧ್ಯರಾತ್ರಿಯೊಳಗೆ ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದೆ.