ನವದೆಹಲಿ: ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ವಿದ್ಯಾರ್ಥಿನಿಯರ ಹಿತರಕ್ಷಣೆಯಿಂದಾಗಿ ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳು ತಮ್ಮ ತಮ್ಮ ಯಾವುದೇ ಉದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ತನಿಖೆ ಮಾಡಲು ಸಮಿತಿಗಳನ್ನು ರಚಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ದೇಶದ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಿದೆ. ಲೈಂಗಿಕ ಕಿರುಕುಳ ತಡೆ ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ ಈ ಸಮಿತಿಗಳನ್ನು ರಚಿಸುವಂತೆ ತಿಳಿಸಿದೆ.
ಈ ಸಂಬಂಧ ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಆಯೋಗವು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 ಜಾರಿಗೆ ತರುವಂತೆ ಸೂಚಿಸಿದೆ.
ಎಲ್ಲಾ ವೈದ್ಯಕೀಯ ಕಾಲೇಜುಗಳು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಎಲ್ಲಾ ಮೆಡಿಕಲ್ ಕಾಲೇಜುಗಳು ಮತ್ತು ಸಂಸ್ಥೆಗಳು, ಮೆಡಿಕಲ್ ಕಾಲೇಜ್ ಮತ್ತು ಸಂಸ್ಥೆಗಳಲ್ಲು ಐಸಿಸಿಎಸ್, ಎಲ್ಸಿಎಸ್, ಐಸಿಎಸ್ ಅನ್ನು ರಚಿಸಿದೆಯಾ ಎಂದು ಪರಿಶೀಲನೆ ನಡೆಸಬೇಕು. ಸಮಿತಿಗಳು ಪೊಶ್ ಕಾಯ್ದೆ (POSH Act)ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಮಿತಿಗಳು ಗಮನವಹಿಸಬೇಕು ಎಂದು ತಿಳಿಸಿದ್ದಾರೆ.
ಸಂಸ್ಥೆಗಳು ಐಸಿಸಿಎಕ್/ಎಲ್ಸಿಎಸ್/ ಐಸಿಎಸ್ ರಚನೆ ಬಳಿಕ ಅದರ ಕುರಿತು ಸಂಪೂರ್ಣ ಮಾಹಿತಿ, ಇಮೇಲ್ ಐಡಿ ಮತ್ತು ಸಮಿತಿ ಸಂಬಂಧಿಸಿದ ವ್ಯಕ್ತಿಗಳ ಸಂಪರ್ಕವನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಆನ್ಲೈನ್ ಮೂಲಕ ಸಂಬಂಧಿಸಿದ ನಿಯಮ ಮತ್ತು ನಿಬಂಧನೆ, ಅಂತರಿಕ ನಿಯಮದ ಅಡಿ ದೂರು ದಾಖಲಿಸುವ ವ್ಯವಸ್ಥೆ ಕಲ್ಪಿಸಬೇಕು. ಈ ವೆಬ್ಸೈಟ್ನ್ನು ಸಂಸ್ಥೆ, ಸಂಘಟನೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಕಾಲ ಕಾಲಕ್ಕೆ ತಕ್ಕ ಮಾಹಿತಿಗಳನ್ನು ಭರ್ತಿ ಮಾಡಬೇಕು ಎಂದು ಸೂಚಿಸಿದೆ.
ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಉಡುಪಿ ಘಟನೆ.. ಇತ್ತೀಚೆಗೆ ಉಡುಪಿಯ ಪ್ಯಾರಾ ಮೆಡಿಕಲ್ನಲ್ಲಿ ನಡೆದ ವಿಡಿಯೋ ಚಿತ್ರೀಕರಣ ಘಟನೆ ಕೂಡ ದೇಶದಲ್ಲಿ ಸದ್ದು ಮಾಡಿತ್ತು. ಶೌಚಾಲಯದಲ್ಲಿ ವಿದ್ಯಾರ್ಥಿಗಳ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಘಟನೆ ಕುರಿತು ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಉಡುಪಿಗೆ ಆಗಮಿಸಿದ್ದರು. ಈ ಘಟನೆ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಿಸಲು ಇಲ್ಲಿಗೆ ಬಂದಿದ್ದೇನೆ. ಮೊದಲು ಪೊಲೀಸರನ್ನು ಭೇಟಿ ಮಾಡಿ ವಿವರಗಳನ್ನು ಪಡೆಯುತ್ತೇನೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿನಿಯರನ್ನೂ ಮಾತನಾಡಿಸುತ್ತೇನೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದಿದ್ದರು.
ಈ ಬೆನ್ನಲ್ಲೇ ವಿದ್ಯಾರ್ಥಿಗಳ ಹಿತ ಕಾಯುವ ಉದ್ದೇಶ ಜೊತೆಗೆ ಅವರ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನೆಲೆ ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗವೂ ದೇಶದ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಈ ಸುತ್ತೋಲೆ ರವಾನಿಸಿದೆ. ಈ ಮೂಲಕ ಲೈಂಗಿಕ ದೌರ್ಜನ್ಯ ತಡೆಗೆ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ, ಇದಕ್ಕೆ ಸಮಿತಿ ರಚಿಸುವಂತೆ ತಿಳಿಸಿದೆ.
ಇದನ್ನೂ ಓದಿ: ಉಡುಪಿ ವಿಡಿಯೋ ಪ್ರಕರಣ: ಕಾಲೇಜು ಆಡಳಿತ ಮಂಡಳಿ, ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ