ಪುಣೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬಾರಾಮತಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ದೇಶದ ಪ್ರತಿಯೊಂದು ಪ್ರದೇಶದಲ್ಲೂ ತನ್ನ ಸಂಘಟನೆ ಬಲಪಡಿಸುವತ್ತ ಗಮನ ಹರಿಸುತ್ತಿದೆ. ನಾನು ಬಾರಾಮತಿಗೆ ಬಂದಿರುವುದು ಬಿಜೆಪಿಯ ನೆಲೆ ಬಲಪಡಿಸಲು, ಯಾವುದೇ ಕುಟುಂಬವನ್ನು ಗುರಿಯಾಗಿಸಲು ಅಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಚುನಾವಣೆಯಲ್ಲಿ, ವೇದಾಂತ - ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರವನ್ನು ರಾಜ್ಯದಿಂದ ಗುಜರಾತ್‌ಗೆ ಸ್ಥಳಾಂತರಿಸುವ ಬಗ್ಗೆ "ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ" ಎಂದು ಮಹಾರಾಷ್ಟ್ರದ ವಿರೋಧ ಪಕ್ಷಗಳನ್ನು ಟೀಕಿಸಿದರು ಮತ್ತು ತಮ್ಮ ಆಡಳಿತದಲ್ಲಿ ಐದು ದೊಡ್ಡ ಯೋಜನೆಗಳಿಗೆ ಅಡೆತಡೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ: ಮಹಾರಾಷ್ಟ್ರದಲ್ಲಿ ಬುಲೆಟ್ ರೈಲು ಯೋಜನೆ ನಿಲ್ಲಿಸಿದವರು ಯಾರು?, ಪಾಲ್ಘರ್ ಜಿಲ್ಲೆಯಲ್ಲಿ ₹65,000 ಕೋಟಿ ವೆಚ್ಚದ ವಾಧ್ವನ್ ಯೋಜನೆ ನಿಲ್ಲಿಸಿದವರು ಯಾರು?, ನಾನಾರ್ ರಿಫೈನರಿ ಯೋಜನೆಯನ್ನು ನಿಲ್ಲಿಸಿದವರು ಯಾರು ಮತ್ತು ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಯೋಜನೆಗೆ ಅಡೆತಡೆಗಳನ್ನು ಸೃಷ್ಟಿಸಿದವರು ಯಾರು? ಎಂದು ಪ್ರಶ್ನಿಸಿದರು.
ಈ ಯೋಜನೆಗಳು ಮಹಾರಾಷ್ಟ್ರಕ್ಕೆ ಪ್ರಯೋಜನಕಾರಿಯಾಗಿಲ್ಲವೇ?. ಈ ಎಲ್ಲ ಯೋಜನೆಗಳು ಗುಜರಾತ್‌ಗೆ ಲಾಭದಾಯಕವೇ? ನೀವು ಅಧಿಕಾರದಲ್ಲಿದ್ದಾಗ ಒಂದಲ್ಲ ಎರಡಲ್ಲ ಐದು ಯೋಜನೆಗಳಿಗೆ ಅಡ್ಡಗಾಲು ಹಾಕಿದ್ದೀರಿ. ಈಗ ನೀವು ಮಹಾರಾಷ್ಟ್ರದ ಹಿತಾಸಕ್ತಿ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ ಮತ್ತು ರಾಜಕೀಯಕ್ಕಾಗಿ ಏನು ಬೇಕಾದರೂ ಹೇಳುತ್ತಿದ್ದೀರಿ ಎಂದು ಆರೋಪಿಸಿದರು.
ಯಾವುದೇ ಕುಟುಂಬವನ್ನು ಗುರಿಯಾಗಿಸುವ ಆಸಕ್ತಿಯಿಲ್ಲ: ಬಾರಾಮತಿ ಭದ್ರಕೋಟೆಯಾಗಿರುವ ಶರದ್ ಪವಾರ್ ಮತ್ತು ಅವರ ಕುಟುಂಬ ಟೀಕಿಸುವುದನ್ನು ಅವರು ನಿರಾಕರಿಸಿದರು. ಪವಾರ್ ಮೇಲೆ ಪದೇ ಪದೆ ಕೇಳಿದ ಪ್ರಶ್ನೆಗಳಿಗೆ ಹಣಕಾಸು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2024 ರ ಚುನಾವಣೆಯಲ್ಲಿ ರಾಜ್ಯದಿಂದ 48 ಲೋಕಸಭಾ ಸ್ಥಾನಗಳಲ್ಲಿ 45 ಸ್ಥಾನಗಳನ್ನು ಗೆಲ್ಲಲು ಭಾರತೀಯ ಜನತಾ ಪಕ್ಷದ 'ಮಿಷನ್ 45' ಭಾಗವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆಯೇ ಹೊರತು ಯಾವುದೇ ಕುಟುಂಬಕ್ಕಾಗಿ ಅಲ್ಲ ಎಂದು ಅವರು ಹೇಳಿದರು.
ತಮ್ಮ ಪ್ರವಾಸದ ಭಾಗವಾಗಿ ಸೀತಾರಾಮನ್ ಅವರು ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸಚಿವರು ನಮ್ಮ ಮನೆಯಲ್ಲಿಯೇ ಉಳಿದು ಕುಟುಂಬದ ಎಲ್ಲ ಸದಸ್ಯರೊಂದಿಗೆ ಸಂವಾದ ನಡೆಸಿದ್ದು ನಮಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಖಡಕ್‌ವಾಸ್ಲಾ ಬಿಜೆಪಿ ಶಾಸಕ ಭೀಮರಾವ್ ತಾಪೀರ್ ಹೇಳಿದ್ದಾರೆ.
ಪುಣೆ ನಗರದ ಬಳಿ ಈ ಹಿಂದೆ ಸ್ಥಾಪಿಸಲು ಉದ್ದೇಶಿಸಿರುವ ಭಾರತೀಯ ಸಂಘಟಿತ ವೇದಾಂತ ಮತ್ತು ತೈವಾನ್‌ನ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್‌ನ ಜಂಟಿ ಉದ್ಯಮದ ಸೆಮಿಕಂಡಕ್ಟರ್ ಯೋಜನೆಯು ಗುಜರಾತ್‌ನಲ್ಲಿ ಬರಲಿದೆ ಎಂದು ಕಳೆದ ವಾರ ಘೋಷಿಸಲಾಗಿದೆ. ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಈ ವಿಷಯದ ಬಗ್ಗೆ ಕೇಂದ್ರ ಮತ್ತು ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು, ಆರ್ಥಿಕತೆಯನ್ನು ಕಡೆಗಣಿಸಿ ₹ 1.54 ಲಕ್ಷ ಕೋಟಿ ಸ್ಥಾವರವನ್ನು ಗುಜರಾತ್‌ಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಬ್ಯಾಂಕ್ ಮುಂಚೂಣಿ ಸಿಬ್ಬಂದಿ ಸ್ಥಳೀಯ ಭಾಷೆ ತಿಳಿದಿರಲಿ: ನಿರ್ಮಲಾ ಸೀತಾರಾಮನ್