ನವದೆಹಲಿ: ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರ "ಕೆಲಸದ ಪರಿಸ್ಥಿತಿ ಕಳಪೆಯಾಗಿದೆ" ಎಂಬ ಆರೋಪದ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಹೆಚ್‌ಆರ್‌ಸಿ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ದೇಶದ ಗ್ರಾಮೀಣ ಜನರ ಆರೋಗ್ಯ ವ್ಯವಸ್ಥೆ ಸಂಪೂರ್ಣ ಆಶಾ ಕಾರ್ಯಕರ್ತೆಯ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ, ಆಶಾ ಕಾರ್ಯಕರ್ತೆಯರ ಕೆಲಸದ ಪರಿಸ್ಥಿತಿ ಕಳಪೆಯಾಗಿದೆ ಎಂಬುವುದು ನಿಜವಾಗಿದ್ದರೆ, ಅದೊಂದು ಗಂಭೀರ ವಿಷಯ ಎಂದು ಎನ್ ಹೆಚ್‌ಆರ್‌ಸಿ ಹೇಳಿದೆ.
ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರೂ, ಆಶಾ ಕಾರ್ಯರ್ತೆಯರಿಗೆ ಬಾಕಿ ವೇತನ ಮತ್ತು ಸುರಕ್ಷತಾ ಸಾಧನಗಳನ್ನು ನೀಡಿಲ್ಲ ಎಂಬ ಬಗ್ಗೆ ದೂರುಗಳು ಬಂದಿತ್ತು. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿರುವ ಎನ್‌ಹೆಚ್‌ಆರ್‌ಸಿ ಆರು ವಾರಗಳಲ್ಲಿ ಉತ್ತರಿಸುವಂತೆ ತಿಳಿಸಿದೆ.
ಇದನ್ನೂ ಓದಿ : ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿ ಆಂಟಿಗುವಾದಿಂದಲೂ ನಾಪತ್ತೆ
ವರದಿಯಲ್ಲಿ ಪ್ರತಿ ರಾಜ್ಯದಲ್ಲಿ ಎಷ್ಟು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರಿಗೆ ಪಾವತಿಸಿದ ವೇತನ ಎಷ್ಟು?. ಅದರಲ್ಲಿ ಪಾವತಿಸಲು ಬಾಕಿ ಇರುವುದು ಎಷ್ಟು?. ಆಶಾ ಕಾರ್ಯಕರ್ತೆಯ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳೇನು?. ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ನೀಡಿದ ಸೌಲಭ್ಯಗಳೇನು?. ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದಿದ ಆಶಾ ಕಾರ್ಯಕರ್ತೆಯ ಕುಟುಂಬಕ್ಕೆ ನೀಡಿದ ಪರಿಹಾರವೇನು?. ಆಶಾ ಕಾರ್ಯಕರ್ತೆಯರಿಗೆ ಒದಗಿಸಲಾಗಿರುವ ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಆಯೋಗ ನೋಟಿಸ್ನಲ್ಲಿ ಸೂಚಿಸಿದೆ.