ಕಠ್ಮಂಡು(ನೇಪಾಳ): ಮೂರು ದಿನಗಳ ಹಿಂದಷ್ಟೇ ಪಸಾಂಗ್ ದಾವಾ 26 ನೇ ಬಾರಿಗೆ ವಿಶ್ವದ ಅತಿ ಎತ್ತರದ ಹಿಮಶಿಖರ ಎವರೆಸ್ಟ್ ಹತ್ತಿ ದಾಖಲೆ ಮಾಡಿದ್ದರು. ಇದಾದ ಬೆನ್ನಲ್ಲೇ ಇಂದು ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 27 ನೇ ಬಾರಿಗೆ ಮೌಂಟ್ ಎವರೆಸ್ಟ್ ಆರೋಹಣ ಮಾಡುವ ಮೂಲಕ ದಾಖಲೆ ಬರೆದರು.
53 ವರ್ಷ ವಯಸ್ಸಿನ ಶೆರ್ಪಾ ಕಾಮಿ ರೀಟಾ ಅವರು ಈ ಹಿಂದೆ 26 ಬಾರಿ ವಿಶ್ವದ ಅತಿ ಎತ್ತರದ ಶಿಖರವನ್ನು ಹತ್ತಿ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದರು. ಕಾಮಿ ರೀಟಾ ಅವರು ಬುಧವಾರ ಬೆಳಗ್ಗೆ 8,849 ಮೀಟರ್ (29,032 ಅಡಿ) ಪರ್ವತವನ್ನು ಆರೋಹಣ ಮಾಡಿದರು ಎಂದು ಅವರ ಸಾಹಸದ ಸಂಘಟಕ ಸೆವೆನ್ ಸಮ್ಮಿಟ್ ಟ್ರೆಕ್ಸ್ ಹೇಳಿದೆ.
"ಇಂದು ಬೆಳಗ್ಗೆ 8.30 ಗಂಟೆಗೆ, ಕಾಮಿ ರೀಟಾ ಅವರು ನಂಬಲಸಾಧ್ಯವಾದ 27 ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದರು ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ಹೇಳಿದರು. ಮೇ 14 ರಂದು ಇನ್ನೊಬ್ಬ ಶೆರ್ಪಾ ಪಸಾಂಗ್ ದಾವಾ ಅವರು 26 ನೇ ಬಾರಿಗೆ ಶಿಖರವನ್ನು ಆರೋಹಣ ಮಾಡಿ ಕಾಮಿ ರೀಟಾ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಕಾಮಿ ರೀಟಾ ಅವರು ಅದನ್ನೂ ದಾಟಿದ್ದಾರೆ.
1994 ರಿಂದ ಆರೋಹಣ ಅಭ್ಯಾಸ: ಸೆವೆನ್ ಸಮ್ಮಿಟ್ ಟ್ರೆಕ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಿರಿಯ ಶೆರ್ಪಾ ಆಗಿ ಕೆಲಸ ಮಾಡುತ್ತಿರುವ ಕಾಮಿ ರೀಟಾ, ಮೇ 13, 1994 ರಂದು ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರಿದ್ದರು. 1994 ರಿಂದ 2023 ರ ನಡುವೆ ಅವರು 27 ಬಾರಿ ಶಿಖರವನ್ನು ಹತ್ತಿದ್ದಾರೆ.
ಎವರೆಸ್ಟ್ ಜೊತೆಗೆ ಅವರು ಕೆ2 ಮತ್ತು ಲೋಟ್ಸೆ ಶಿಖರವನ್ನು ತಲಾ ಒಂದು ಬಾರಿ, ಮನಸ್ಲು ಮೂರು ಬಾರಿ, ಮತ್ತು ಚೋ ಓಯು ಶಿಖರವನ್ನು ಎಂಟು ಬಾರಿ ಹತ್ತಿದ್ದಾರೆ. ಅವರು 8,000 ಮೀಟರ್‌ಗಿಂತ ಹೆಚ್ಚು ಎತ್ತರವನ್ನು ದಾಟಿದ ದಾಖಲೆಯನ್ನೂ ಹೊಂದಿದ್ದಾರೆ.
ಕಾಮಿ ರೀಟಾ ಅವರು 1992 ರಿಂದಲೂ ಎವರೆಸ್ಟ್ ಶಿಖರ ಹತ್ತುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಅವರು ಮೊದಲು ಹೀಗೆ ಎವರೆಸ್ಟ್ ಹತ್ತುವ ಸಾಹಸಿಗರಿಗೆ ಸಹಾಯಕ ಸಿಬ್ಬಂದಿಯಾಗಿ ಸೇರಿದಂದಿನಿಂದಲೂ ಅವರು ಪರ್ವತಾರೋಹಣ ಪ್ರಯಾಣ ಮುಂದುವರಿಸಿದ್ದರು.
11 ಸಾವಿರಕ್ಕೂ ಅಧಿಕ ಸಲ ಆರೋಹಣ: ಬ್ರಿಟಿಷ್ ಶೆರ್ಪಾ ಕೆಂಟನ್ ಕೂಲ್ ಅವರು 17 ಬಾರಿ ಎವರೆಸ್ಟ್ ಶಿಖರವನ್ನು ಏರಿ ದಾಖಲೆಯನ್ನು ಬರೆದಿದ್ದಾರೆ. ವಿಶ್ವದ ಯಾವುದೇ ವಿದೇಶಿ ಆರೋಹಿಗಳಿಗಿಂತಲೂ ಇವರು ಎವರೆಸ್ಟ್‌ನ ಅತಿ ಹೆಚ್ಚು ಶಿಖರಗಳನ್ನು ಹತ್ತಿದ ದಾಖಲೆ ಇವರ ಹೆಸರಲ್ಲಿದೆ. ಈ ವರ್ಷ ನೇಪಾಳದ ಪ್ರವಾಸೋದ್ಯಮ ಇಲಾಖೆಯು 478 ವ್ಯಕ್ತಿಗಳಿಗೆ ಎವರೆಸ್ಟ್ ಅನ್ನು ಏರಲು ಪರವಾನಗಿ ನೀಡಿದೆ.
ಎವರೆಸ್ಟ್ ಶಿಖರವನ್ನ ನೇಪಾಳಿ ಮತ್ತು ಟಿಬೆಟಿಯನ್ ಎರಡೂ ಕಡೆಯಿಂದ ಈವರೆಗೂ 11,000 ಕ್ಕೂ ಹೆಚ್ಚು ಬಾರಿ ಏರಲಾಗಿದೆ. ಇದನ್ನು ಮೊದಲು 1953 ರಲ್ಲಿ ಅಳೆಯಲಾಯಿತು. ಪರ್ವತದಲ್ಲಿ 320 ಕ್ಕೂ ಹೆಚ್ಚು ಸಾಹಸಿಗರು ಪ್ರಾಣ ಕಳೆದುಕೊಂಡಿದ್ದಾರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.