ಶಿಮ್ಲಾ(ಹಿಮಾಚಲ ಪ್ರದೇಶ): ರಾಜ್ಯದ ಮಂಡಿ ಜಿಲ್ಲೆಯ ಶೆಹ್ನು ಗೌನಿ ಗ್ರಾಮ ಮತ್ತು ಖೋಲನಾಲಾ ಪಂಚಾಯತ್‌ನಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಅವಘಡದಲ್ಲಿ ಸಿಲುಕಿದ್ದ 51 ಜನರನ್ನು ಎನ್ಡಿಆರ್ಎಫ್ನ 14ನೇ ಬೆಟಾಲಿಯನ್ ರಕ್ಷಿಸಿದೆ. ಮಂಡಿ ಜಿಲ್ಲೆಯ ಹನೋಗಿ ಮಾತಾ ದೇವಸ್ಥಾನದ ಸಮೀಪವಿರುವ ಗ್ರಾಮ ಪಂಚಾಯತ್ ಖೋಲನಾಲ್ನಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 300 ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮಾಹಿತಿ ತಿಳಿದ ಎನ್‌ಡಿಆರ್‌ಎಫ್ ತಂಡ ತಕ್ಷಣ ಸೆರಾಜ್ ಭವನ ಕುಲುವಿನಿಂದ ಘಟನಾ ಸ್ಥಳಕ್ಕೆ ತೆರಳಿತು. ಭೂಕುಸಿತದಿಂದ ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಎನ್‌ಡಿಆರ್‌ಎಫ್ ತಂಡ ಹನೋಗಿಯಿಂದ ಮಂಡಿ ಜಿಲ್ಲೆಯ ಖೋಲನಾಲಾ ಗ್ರಾಮದ ಘಟನಾ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳಿತು. ಸುಮಾರು 8 ಕಿ.ಮೀ ದೂರವನ್ನು ಕ್ರಮಿಸಿ ಶೆಹ್ನು ಗೌನಿ ಗ್ರಾಮವನ್ನು ತಲುಪಿತು. 16 ಪುರುಷರು, 20 ಮಹಿಳೆಯರು ಮತ್ತು 15 ಮಕ್ಕಳು ಅವಘಡದಲ್ಲಿ ಸಿಲುಕಿದ್ದು, ಅವರನ್ನು ಎನ್‌ಡಿಆರ್‌ಎಫ್ ತಂಡ ಹನೋಗಿ ಗ್ರಾಮಕ್ಕೆ ಸ್ಥಳಾಂತರಿಸಿದೆ.
ಬಾಲಿ ಚೌಕಿಯ ಎಸ್ಡಿಎಂ, ತಹಸೀಲ್ದಾರ್ ಮತ್ತು ಬಿಡಿಒ ಅವರೊಂದಿಗಿನ ಉಳಿದ ತಂಡ ಕಾಲ್ನಡಿಗೆಯಲ್ಲಿ ಮಂಡಿ ಜಿಲ್ಲೆಯ ಖೋಲನಾಲಾ ಗ್ರಾಮದ ಘಟನಾ ಸ್ಥಳಕ್ಕೆ ತೆರಳಿತು. ಸಿಕ್ಕಿಬಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಗುರುವಾರ ಮುಂಜಾನೆ, ಮಂಡಿ ಜಿಲ್ಲಾಡಳಿತ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ಜಿಲ್ಲೆಯ ದೂರದ ಪ್ರದೇಶಕ್ಕೆ ಆಹಾರ ಪದಾರ್ಥಗಳು ಮತ್ತು ಔಷಧಗಳನ್ನು ರವಾನೆ ಮಾಡಿದೆ.
ಮೊದಲ ವಿಮಾನದಲ್ಲಿ ತಲಾ 15 ಕೆ.ಜಿ ತೂಕದ 55 ಕಿಟ್‌ಗಳು ಮತ್ತು ಮೂರು ಬಾಕ್ಸ್ ಔಷಧಗಳನ್ನು ಕಳುಹಿಸಲಾಗಿತ್ತು. ಆಹಾರ ಪದಾರ್ಥಗಳ ಪ್ರತಿಯೊಂದು ಕಿಟ್‌ನಲ್ಲಿ ಹಿಟ್ಟು, ಅಕ್ಕಿ, ಎರಡು ರೀತಿಯ ಬೇಳೆ ಕಾಳುಗಳು, ಎಣ್ಣೆ ಮತ್ತು ಮಸಾಲೆಗಳು ಇವೆ. ಮಂಡಿಯ ಕಂಗ್ನಿಧರ್‌ನಿಂದ ಹೆಲಿಕಾಪ್ಟರ್ ವಸ್ತುಗಳೊಂದಿಗೆ ಹೊರಟಿತು. ಕರ್ತಾಚ್ ಗ್ರಾಮಕ್ಕೂ ಪರಿಹಾರ ಸಾಮಗ್ರಿ ಕಳುಹಿಸಲಾಗಿದೆ. ರಾಜ್ಯದ ಇತರ ಎರಡು ಸ್ಥಳಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಮತ್ತೊಂದು ವಿಮಾನವನ್ನು ನಿಗದಿಪಡಿಸಲಾಗಿದೆ.
ಯೆಲ್ಲೋ ಅಲರ್ಟ್ ಘೋಷಣೆ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಮತ್ತು ಶುಕ್ರವಾರ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಜತೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. "ಸೋಲನ್, ಶಿಮ್ಲಾ, ಸಿರ್ಮೌರ್, ಮಂಡಿ, ಕುಲು, ಉನಾ, ಬಿಲಾಸ್ಪುರ್ ಮತ್ತು ಕಂಗ್ರಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಾವು ಆಗಸ್ಟ್ 24 ಮತ್ತು 25ರಂದು ಯೆಲ್ಲೋ ಅಲರ್ಟ್ ಘೋಷಿಸಿದ್ಧೇವೆ" ಎಂದು ಐಎಂಡಿ ವಿಜ್ಞಾನಿ ಸಂದೀಪ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕುರಿತು ಮಾತನಾಡಿದ ಸಂದೀಪ್ ಕುಮಾರ್ ಶರ್ಮಾ, 'ಕಳೆದ 24 ಗಂಟೆಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಮಂಡಿ, ಕಂಗ್ರಾ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪ್ರಮಾಣಾನುಗುಣವಾಗಿ ಹೇಳುವುದಾದರೆ, ಜೋಗಿಂದರ್ ನಗರದಲ್ಲಿ 154 ಮಿಮೀ, ಪಾಲಂಪೂರ್‌ನಲ್ಲಿ 136 ಮಿಮೀ, ಮತ್ತು ಸಿರ್ಮೌರ್‌ನಲ್ಲಿ 70 ಮಿಮೀ ಮಳೆಯಾಗಿದೆ. ಶಿಮ್ಲಾ ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 80 ಮಿಮೀ ಮಳೆ ದಾಖಲಾಗಿದೆ'. ಆಗಸ್ಟ್ 26ರಿಂದ, ಹವಾಮಾನ ಬದಲಾಗುತ್ತದೆ. ಬಯಲು ಮತ್ತು ಮಧ್ಯ ಪ್ರದೇಶಗಳ ಜಿಲ್ಲೆಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗುತ್ತದೆ. ಆಗಸ್ಟ್ 26 ರಿಂದ 30 ರವರೆಗೆ ಮಳೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ಈ ಋತುವಿನಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯ ಕುರಿತು ಮಾತನಾಡಿದ ಅವರು, "ಜೂನ್‌ನಿಂದ ಆಗಸ್ಟ್‌ವರೆಗೆ ಹಿಮಾಚಲ ಪ್ರದೇಶದಲ್ಲಿ ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆಯಾಗಿದೆ. ದಾಖಲಾದ ಮಳೆ 804 ಮಿ.ಮೀ. ಸಾಮಾನ್ಯ ಮಳೆ 571 ಮಿ.ಮೀ. ಕೇವಲ ಲಾಹೌಲ್ನಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆಗಿಂತ 10% ಹೆಚ್ಚು ಮಳೆಯಾಗಿದೆ. ಜತೆಗೆ ಮಂಡಿ ಮತ್ತು ಬಿಲಾಸ್‌ಪುರದಲ್ಲಿ ಹೆಚ್ಚಿನ ಮಳೆಯಾಗಿದೆ ಎಂದು ವಿವರಿಸಿದರು.
ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಸರ್ಕಾರ: ಭಾರತೀಯ ಹವಾಮಾನ ಇಲಾಖೆ ನೀಡಿದ ಯೆಲ್ಲೋ ಅಲರ್ಟ್ ನೀಡಿದ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ ಮಂಡಿ, ಕುಲು ಮತ್ತು ಧರ್ಮಶಾಲಾ ಸೇರಿದಂತೆ ಒಟ್ಟು 30 ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಚಾಲಕ ಹುದ್ದೆಯ ಸ್ಕ್ರೀನಿಂಗ್ ಪರೀಕ್ಷೆ ಮುಂದೂಡಿಕೆ: ಹಿಮಾಚಲ ಪ್ರದೇಶ ಹೈಕೋರ್ಟ್ ರಾಜ್ಯದಲ್ಲಿನ ಪ್ರತಿಕೂಲ ಹವಾಮಾನದ ಕಾರಣದಿಂದ ಜಿಲ್ಲಾ ನ್ಯಾಯಾಂಗದ ಚಾಲಕ ಹುದ್ದೆಯ ಸ್ಕ್ರೀನಿಂಗ್ ಪರೀಕ್ಷೆಯನ್ನು ಮುಂದೂಡಿದೆ. ಹಿಮಾಚಲ ಪ್ರದೇಶದ ಹೈಕೋರ್ಟ್ ಪ್ರತಿಕೂಲ ಹವಾಮಾನದ ಕಾರಣ 27.08.2023 ರಂದು ಬೆಳಗ್ಗೆ 11 ರಿಂದ 01:00 ಗಂಟೆಗೆ ವರೆಗೆ ನಡೆಯಬೇಕಿದ್ದ ಚಾಲಕ ಹುದ್ದೆಯ ಸ್ಕ್ರೀನಿಂಗ್ ಪರೀಕ್ಷೆಯನ್ನು ಮುಂದೂಡಿದೆ. ಸ್ಕ್ರೀನಿಂಗ್ ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Watch: ವರುಣಾರ್ಭಟಕ್ಕೆ ಹಿಮಾಚಲ ಪ್ರದೇಶ ತತ್ತರ... ರಕ್ಷಣಾ ಕಾರ್ಯಾಚರಣೆಯ ಡ್ರೋನ್ VIDEO