ಮುಂಬೈ : ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಆಂದೋಲನ ಜೀವಿ' ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಟ್ವಿಟರ್ನಲ್ಲಿ ವಿಡಿಯೋ ಹರಿಬಿಡುವ ಮೂಲಕ ಪ್ರಧಾನಿಯನ್ನು ಅಪಹಾಸ್ಯ ಮಾಡಿದೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸುದೀರ್ಘ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಕೃಷಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು 'ಆಂದೋಲನ ಜೀವಿ' ಎಂದು ಕರೆದಿದ್ದರು. ಪ್ರಧಾನಿ ಮೋದಿ ಪ್ರತಿಭಟನಾಕಾರರನ್ನು ಆಂದೋಲನ ಜೀವಿ ಎಂದು ಕರೆಯುವ ಮೂಲಕ ಅವರಿಗೆ ಅಪಮಾನ ಮಾಡಿದ್ದಾರೆ.
ದೇವೇಂದ್ರ ಫಡ್ನವೀಸ್, ಚಂದ್ರಕಾಂತ್ ಬಚು ಪಾಟೀಲ್, ಕಿರಿತ್ ಸೋಮಯ್ಯ ಮತ್ತು ಸ್ಮೃತಿ ಇರಾನಿ ಸೇರಿದಂತೆ ವಿವಿಧ ಭಾರತೀಯ ಜನತಾ ಪಕ್ಷದ ಸಚಿವರೇ ಈ ಹಿಂದೆ ಅದೆಷ್ಟೋ ಬಾರಿ ಪ್ರತಿಭಟಿಸಿರುವುದು ಅವರಿಗೆ ತಿಳಿದಿಲ್ಲವೇ ಎಂದು ಎನ್‌ಸಿಪಿ ಅಪಹಾಸ್ಯ ಮಾಡಿದೆ.
ಇನ್ನು, ಈ ಬಗ್ಗೆ ಎನ್‌ಸಿಪಿ ನಾಯಕ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ್ ಭುಜಬಲ್ ಪ್ರತಿಕ್ರಯಿಸಿದ್ದು, ಪ್ರಧಾನಿ ಮೋದಿ ಈ ರೀತಿ ಹೇಳಿಕೆ ನೀಡಿರುವುದು ಪ್ರತಿಭಟನಾಕಾರರಿಗೆ ಕಿರುಕುಳ ನೀಡಿದಂತೆ. ಮಾತಾನಾಡುವುದಕ್ಕೂ ಮೊದಲು ಇಲ್ಲಸಲ್ಲದ ಹೇಳಿಕೆ ನೀಡುವ ಮುನ್ನ ಕೇಸರಿ ಪಕ್ಷವೇ ಸದನದಲ್ಲಿ ಅನೇಕ ಪ್ರತಿಭಟನೆಗಳನ್ನು ನಡೆಸಿರುವುದನ್ನು ಅವರು ನೆನಪಿಸಿಕೊಳ್ಳಬೇಕಿತ್ತು ಎಂದಿದ್ದಾರೆ.