ಮುಂಬೈ: ಕ್ರೂಸ್ ಡ್ರಗ್ಸ್ ಕೇಸ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ದ ವಿಶೇಷ ತನಿಖಾ ದಳ ಮುಂಬೈನ ಹಲವು ಸ್ಥಳಗಳಿಗೆ ಬೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ಎಸ್ಐಟಿಯು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸೇರಿ ಒಟ್ಟು 7 ಮಂದಿಗೆ ಸಮನ್ಸ್ ಜಾರಿ ಮಾಡಿದೆ.
ಆದರೆ ಆರ್ಯನ್ ಖಾನ್ ಹಾಗೂ ದದ್ಲಾನಿ ಅನಾರೋಗ್ಯದ ಕಾರಣವೊಡ್ಡಿದ್ದು, ಎನ್ಸಿಬಿ-ಎಸ್ಐಟಿ(NCB SIT) ಮುಂದೆ ಕೆಲ ದಿನಗಳ ಬಳಿಕ ಹಾಜರಾಗಲಿರುವ ಸಾಧ್ಯತೆ ಇದೆ. ಇದರ ಜೊತೆಗೆ ರೇವ್ ಪಾರ್ಟ್ ನಡೆದಿದೆ ಎನ್ನಲಾಗಿದ್ದ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್ಗೆ ಎಸ್ಐಟಿ ಭೇಟಿ ನೀಡಿದೆ. ಅಲ್ಲದೆ ಆರ್ಯನ್ ಖಾನ್ ಬಿಡುಗಡೆಗೆ ಹಣ ನೀಡಲಾಗಿದೆ ಎಂದು ಆರೋಪಿಸಿದ್ದ ಫಿನಿಕ್ಸ್ ಮಾಲ್ ಬಳಿಯ ಲೋವರ್ ಪರೇಲ್‌ನಲ್ಲಿರುವ ಸ್ಥಳಕ್ಕೂ ಭೇಟಿ ನೀಡಿದೆ.
ದದ್ಲಾನಿ ಮೂಲಕ ಸ್ಯಾಮ್ ಡಿಸೋಜ ಮತ್ತು ಕೆ.ಪಿ ಗೋಸಾವಿ 50 ಲಕ್ಷ ರೂ. ಪಡೆದಿದ್ದರು ಎಂದು ಈ ಮೊದಲು ಸ್ವತಂತ್ರ ಸಾಕ್ಷಿದಾರ ಪ್ರಭಾಕರ್ ಸೈಲ್ ಆರೋಪಿಸಿದ್ದ. ಈ ಮಾತುಕತೆ ನಡೆದಿದೆ ಎನ್ನಲಾದ ಜಾಗಕ್ಕೂ ಎಸ್ಐಟಿ ತೆರಳಿದೆ.
ಸದ್ಯ ಮಹಾರಾಷ್ಟ್ರ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಸೈಲ್ ಅವರ ಹೇಳಿಕೆ ದಾಖಲಿಸಲು ಎಸ್ಐಟಿ ತಂಡ ಯೋಜಿಸಿದೆ. ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಶಾರುಖ್ ಖಾನ್ ಅವರಿಗೆ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸುವ ಮೂಲಕ ಸೈಲ್ ಭಾರಿ ಸಂಚಲನಕ್ಕೆ ಕಾರಣರಾಗಿದ್ದರು. ವಾಂಖೆಡೆ ಈ ಆರೋಪ ಅಲ್ಲಗಳೆದ ಬಳಿಕ ಎನ್ಸಿಬಿ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ಭೂಪಾಲ್ನ ಮಕ್ಕಳ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: 4 ಹಸುಗೂಸುಗಳ ದಾರುಣ ಸಾವು