ನವದೆಹಲಿ: ಕ್ರೂಸ್ ಡ್ರಗ್ಸ್ ಶಿಪ್ ಪ್ರಕರಣ ದಿನಕ್ಕೊಂದು ತಿರುವು ಕಾಣುತ್ತಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧವೇ ವಂಚನೆ ಆರೋಪ ಕೇಳಿಬಂದಿದ್ದು, ಈ ಕುರಿತು ವಿಚಕ್ಷಣಾ ತನಿಖೆ ನಡೆಸಲು ಎನ್ಸಿಬಿ ಆದೇಶಿಸಿದೆ.
25 ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವ ಆರೋಪ ಸಮೀರ್ ವಾಂಖೆಡೆ ಮೇಲಿದ್ದು, ಈ ಕುರಿತಂತೆ ತನಿಖೆ ನಡೆಸಲಾಗುಗುತ್ತಿದೆ. ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ಎಂಬುವವರ ನಡುವೆ ನಡೆದಿದೆ ಎನ್ನಲಾದ ಮಾತುಕತೆ ಬಗ್ಗೆ ಪ್ರಭಾಕರ್ ಸೈಲ್ ಅಫಿಡವಿಟ್ ಸಲ್ಲಿಸಿದ್ದರು.
ಈ ಅಫಿಡವಿಟ್ನಲ್ಲಿ ಶಾರೂಖ್ ಖಾನ್ ಪುತ್ರನನ್ನು ಬಿಟ್ಟು ಬಿಡಲು 25 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಆದರೆ ಕೆಲವು ಮಾತುಕತೆಗಳ ನಂತರ 18 ಕೋಟಿ ರೂಪಾಯಿಗೆ ಒಪ್ಪಂದವಾಗಿತ್ತು. ಇದರಲ್ಲಿ 8 ಕೋಟಿ ರೂಪಾಯಿಯನ್ನು ಸಮೀರ್ ವಾಂಖೆಡೆಗೆ ನೀಡಬೇಕು ಎಂದು ಕೆ.ಪಿ.ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ನಡುವೆ ಮಾತುಕತೆ ನಡೆದಿತ್ತು ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ.
ಖಾಲಿ ಹಾಳೆಗಳ ಮೇಲೆ ಸಹಿ: ಗೋಸಾವಿ ಶಾರೂಖ್ ಖಾನ್ ಮ್ಯಾನೇಜರ್ನನ್ನೂ ಕೂಡಾ ಭೇಟಿಯಾಗಿದ್ದು, ವಾಂಖೆಡೆ ಎದುರಲ್ಲೇ 9ರಿಂದ 10 ಪುಟಗಳಷ್ಟು ಖಾಲಿ ಹಾಳೆಗಳಿಗೆ ಸಹಿ ಹಾಕುವಂತೆ ಕೇಳಿದ್ದನ್ನು ನಾನು ನೋಡಿದ್ದೇನೆ ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ.
ಇದೇ ವಿಚಾರವಾಗಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಚಕ್ಷಣಾ ತನಿಖೆ ನಡೆಸಲು ಎನ್ಸಿಬಿ ಆದೇಶಿಸಿದೆ. ಎನ್ಸಿಬಿ ಉತ್ತರ ವಲಯದ ಉಪ ನಿರ್ದೇಶಕರಾದ ಜ್ಞಾನೇಶ್ವರ್ ಸಿಂಗ್ ಈ ತನಿಖೆ ನಡೆಸಲಿದ್ದಾರೆ. ಜ್ಞಾನೇಶ್ವರ್ ಸಿಂಗತ್ ಫೆಡರಲ್ ಆ್ಯಂಟಿ-ನಾರ್ಕೋಟಿಕ್ಸ್ ಏಜೆನ್ಸಿಯ ಮುಖ್ಯ ವಿಚಕ್ಷಣಾಧಿಕಾರಿಯೂ ಆಗಿದ್ದಾರೆ.
ಸಮನ್ಸ್ ನೀಡಿಲ್ಲ: ನನ್ನ ಮೇಲಿನ ಆರೋಪಗಳು ಆಧಾರರಹಿತ ಎಂದು ಸಮೀರ್ ವಾಂಖೆಡೆ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ರಾತ್ರಿ ದೆಹಲಿಗೆ ಆಗಮಿಸಿದ ಅವರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸ್ವಲ್ಪ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ನಾನು ಡ್ರಗ್ಸ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯನ್ನು ನಡೆಸುತ್ತಿದ್ದೇನೆ. ನನ್ನ ಮೇಲಿನ ಆರೋಪಗಳು ಆಧಾರರಹಿತ. ನನಗೆ ಎನ್ಸಿಬಿಯಿಂದ ಯಾವುದೇ ಸಮನ್ಸ್ ನೀಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸೆಲ್ಫಿ ಮ್ಯಾನ್ ಸರೆಂಡರ್ ಹೈಡ್ರಾಮಾ: ಮುಂಬೈ ಪೊಲೀಸರಿಂದ ಬೆದರಿಕೆ ಎಂದಿದ್ದ ಕಿರಣ್ ಗೋಸಾವಿ?