ಕೋನಸೀಮಾ (ಆಂಧ್ರಪ್ರದೇಶ): ಇಂದು ನಂದ್ಯಾಲ ಜಿಲ್ಲೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಸಚಿವ ಗಂಟಾ ಶ್ರೀನಿವಾಸ ಅವರನ್ನು ಸಹ ಬಂಧಿಸಲಾಗಿದೆ. ಆದ್ರೆ ತಂದೆ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಬಂಧನದ ಸುದ್ದಿ ತಿಳಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಪ್ರತಿಭಟನೆ ಕೈಗೊಂಡಿದ್ದಾರೆ.
ಚಂದ್ರಬಾಬು ಬಂಧನವಾಗುತ್ತಿರುವ ಮಾಹಿತಿಯೊಂದಿಗೆ ಕೋನಸೀಮಾ ಜಿಲ್ಲೆಯ ರಾಜೋಲು ತಾಲೂಕಿನಿಂದ ನಾರಾ ಲೋಕೆಶ್ ವಿಜಯವಾಡಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ವೇಳೆ ಪೊಲೀಸರು ನಾರಾ ಲೋಕೇಶ್ರನ್ನು ತಡೆದ ಪ್ರಸಂಗ ನಡೆಯಿತು. ಈ ಕ್ರಮದಲ್ಲಿ ಲೋಕೇಶ್ ರಾಜು ಸಿಐ ಗೋವಿಂದರಾಜು ಅವರೊಂದಿಗೆ ವಾಗ್ವಾದಕ್ಕಿಳಿದರು. ಯಾವುದೇ ರೀತಿಯ ನೋಟಿಸ್ ನೀಡದಂತೆ ತಡೆಯುವುದು ಹೇಗೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ನಾಯಕರು ನನ್ನೊಂದಿಗೆ ಬರುತ್ತಿಲ್ಲ. ಕುಟುಂಬದ ಸದಸ್ಯನಾಗಿ ಒಬ್ಬನೇ ಹೋಗುತ್ತಿದ್ದೇನೆ. ನಿಮಗೆ ತಡೆಯುವ ಹಕ್ಕು ಕೊಟ್ಟವರು ಯಾರು ಎಂದು ಪೊಲೀಸರಿಗೆ ನಾರಾ ಲೋಕೇಶ್ ಪ್ರತಿಭಟಿಸಿದರು. ತಂದೆ ಚಂದ್ರಬಾಬು ಅವರ ಬಂಧನವನ್ನು ಖಂಡಿಸಿದ ಮಗ ನಾರಾ ಲೋಕೇಶ್ ಕ್ಯಾಂಪ್ ಸೈಟ್ ಮುಂಭಾಗ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಲೋಕೇಶ್ ತಂಗಿದ್ದ ಸ್ಥಳಕ್ಕೆ ಮಾಧ್ಯಮದವರು ಭೇಟಿ ನೀಡದಂತೆ ಪೊಲೀಸರು ನಿರ್ಬಂಧಿಸಿದ್ದಾರೆ.
ಚಂದ್ರಬಾಬು ನಾಯ್ಡು ಹೇಳಿದ್ದೇನು?: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ನಡೆಸಿದರೆ, ಅದನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದರು.
ಪೊಲೀಸರು ಮಧ್ಯರಾತ್ರಿ ಬಂದು ಭಯ ಪಡಿಸಿದರು. ನಾನೇನು ತಪ್ಪು ಮಾಡಿದೆ? ಏನಾದರೂ ಸಾಕ್ಷಿ ಇದೆಯೇ ಎಂದು ಕೇಳಿದೆ. ಏಕೆ ಬಂಧಿಸಲಾಗುತ್ತಿದೆ ಎಂದು ಕೇಳಲು ನಮಗೆ ಹಕ್ಕಿಲ್ಲವೇ. ಅವರು ಮಾಡಿದ ತಪ್ಪನ್ನು ಹೇಳದೆ ಬಂಧಿಸುತ್ತಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿದ್ದ ಹಿನ್ನೆಲೆ ಯೋಜಿತ ರೀತಿಯಲ್ಲಿ ಬಂಧಿಸಲಾಗುತ್ತಿದೆ. ಎಷ್ಟೇ ಪಿತೂರಿ ಮಾಡಿದರೂ ಕೊನೆಗೆ ನ್ಯಾಯವೇ ಗೆಲ್ಲುತ್ತದೆ. 45 ವರ್ಷಗಳಿಂದ ನಿಸ್ವಾರ್ಥವಾಗಿ ತೆಲುಗು ಜನರ ಸೇವೆ ಮಾಡುತ್ತಿದ್ದೇನೆ. ತೆಲುಗು ಜನರ ಹಿತಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ತೆಲುಗು ಜನರು ಮತ್ತು ಮಾತೃಭೂಮಿಗೆ ಸೇವೆ ಸಲ್ಲಿಸುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಚಂದ್ರಬಾಬು ಹೇಳಿದರು.
ಓದಿ: ಸ್ಕಿಲ್ ಡೆವಲಪ್ಮೆಂಟ್ ಹಗರಣ.. ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ