ನಲ್ಗೊಂಡ : ನಲ್ಗೊಂಡ ಜಿಲ್ಲೆ ಪದ್ದವೂರ ಮಂಡಲ ತಾಂಡಾವೊಂದರಲ್ಲಿ ದತ್ತಿ ಸಂಸ್ಥೆ ನಡೆಸುತ್ತಿದ್ದ ಹಾಸ್ಟೆಲ್ನಲ್ಲಿ 12 ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಮಾವತ್ ಹರೀಶ್ ನಾಯಕ್ ಮತ್ತು ಆತನ ಸಹಚರ ಶ್ರೀನಿವಾಸನಿಗೂ ಜೀವಾವಧಿ ಶಿಕ್ಷೆ ಮತ್ತು ಶ್ರೀನಿವಾಸನ ಪತ್ನಿಗೆ ಆರು ತಿಂಗಳು ಜೈಲು ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ.
ಏನಿದು ಪ್ರಕರಣ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾಗರಂ ತಾಲೂಕಿನ ನಿವಾಸಿಗಳಾದ ನನ್ನಂ ಶ್ರೀನಿವಾಸ್ ರಾವ್ ಮತ್ತು ಸರಿತಾ ದಂಪತಿ ಗ್ರಾಮ ಪುನರ್ ನಿರ್ಮಾಣ ಸಂಸ್ಥೆ (VRVO) ಎಂಬ ಖಾಸಗಿ ಸಂಸ್ಥೆ ಸ್ಥಾಪಿಸಿ ಬಾಲಕಿಯರ ವಸತಿ ನಿಲಯ ನಡೆಸುತ್ತಿದ್ದರು.
ಓದಿ: NEET-PG ಪ್ರವೇಶ : ಒಬಿಸಿಗಳಿಗೆ ಶೇ.27 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ
ಈ ಹಾಸ್ಟೆಲ್‌ನಲ್ಲಿರುವ ಬಾಲಕಿಯರಿಗೆ ಶಿಕ್ಷಣ ನೀಡಲು ರಮಾವತ್ ಹರೀಶ್ ನಿತ್ಯ ಟ್ಯೂಟರ್ ಆಗಿ ಬರುತ್ತಿದ್ದರು. ಈ ವೇಳೆ, 12 ಬಾಲಕಿಯರ ಮೇಲೆ ಹರೀಶ್ ಮೂರು ತಿಂಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಯಾರಾದರೂ ತಿರುಗಿ ಬಿದ್ದರೆ ಕೊಲ್ಲುವುದಾಗಿ ಹರೀಶ್ ಆ ಬಾಲಕಿಯರನ್ನು ಹೆದರಿಸುತ್ತಲೇ ಅತ್ಯಾಚಾರ ಎಸಗುತ್ತಿದ್ದನಂತೆ. ಹರೀಶ್ಗೆ ಶ್ರೀನಿವಾಸ್ ಮತ್ತು ಸರಿತಾ ದಂಪತಿ ಸಹಕರಿಸುತ್ತಿದ್ದರು.
ಇನ್ನು ಈ ಪ್ರಕರಣ 2014ರ ಏಪ್ರಿಲ್ 3ರಂದು ಸಂತ್ರಸ್ತ ಬಾಲಕಿಯಿಂದ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಉಳಿದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದು ತನಿಖೆ ವೇಳೆ ಬಹಿರಂಗವಾಯಿತು. 12 ಬಾಲಕಿಯರ ದೂರಿನ ಮೆರೆಗೆ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದರು.
ದೂರಿನ ಬಳಿಕ ಪೊಲೀಸರು ಆರೋಪಿ ಮೇಲೆ ಬೇರೆ - ಬೇರೆ 12 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 10 ಪ್ರಕರಣಗಳಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಹರೀಶ್ ಮತ್ತು ಶ್ರೀನಿವಾಸ್ಗೆ ಜೀವಾವಧಿ ಶಿಕ್ಷೆ ನೀಡಿ ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಇಷ್ಟಕ್ಕೆ ಸುಮ್ಮನಾಗದ ನ್ಯಾಯಾಲಯ ಬೆದರಿಕೆ ಪ್ರಕರಣದಲ್ಲಿ ಹರೀಶ್ಗೆ ಎರಡು ವರ್ಷ ಮತ್ತು ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮೂರು ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ. ಕೋ - ಹೋಸ್ಟ್ ಹಾಸ್ಟೆಲ್ ಮ್ಯಾನೇಜರ್ ಆಗಿದ್ದ ಶ್ರೀನಿವಾಸ್ ಪತ್ನಿ ಸರಿತಾಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.