ಮೊರಾದಾಬಾದ್ (ಉತ್ತರ ಪ್ರದೇಶ): ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅಮೀರ್ ಅಲಿ ಎಂಬ ಮುಸ್ಲಿಂ ಯುವಕ ಮೊರಾದಾಬಾದ್‌ನ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ. ಧಾರ್ಮಿಕ ಮತಾಂತರಕ್ಕೆ ಅರ್ಜಿ ಸಲ್ಲಿಸಿ ಅಮೀರ್ ಅಲಿಯಿಂದ ಅಮಿತ್ ಮಹೇಶ್ವರಿಯಾಗಿ ಬದಲಾಗಿರುವ ಯುವಕನ ಮನೆಗೆ ಮೊರಾದಾಬಾದ್ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ಇದಕ್ಕಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಯುವಕನ ಭದ್ರತೆಗಾಗಿ ನಿಯೋಜಿಸಿದ್ದಾರೆ.
ಆದರೆ ಅಮೀರ್ ಅಲಿ ಅಲಿಯಾಸ್ ಅಮಿತ್ ಮಹೇಶ್ವರಿ ಪತ್ನಿ ಮೆಹಕ್ ಅಲಿಯಾಸ್ ಗುಲಾಫ್ಷಾ ಮಾಧ್ಯಮಗಳ ಮುಂದೆ ಬಂದು ತನ್ನ ಪತಿ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾಳೆ. ತನ್ನ ಪತಿ ಅಮೀರ್ ಅಲಿ ಮಾಡುತ್ತಿರುವ ನಾಟಕ ಇದು. ಮತಾಂತರ ಕಾನೂನಿನ ನೆಪದಲ್ಲಿ ಅಮೀರ್ ಅಲಿ ಹಿಂದೂ ಯುವತಿಯನ್ನು ಎರಡನೇ ಮದುವೆಯಾಗಲು ಬಯಸಿದ್ದಾರೆ ಎಂದು ಮೆಹಕ್ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.
ಮುಘಲ್‌ಪುರ I ಪ್ರದೇಶದಲ್ಲಿ ವಾಸಿಸುತ್ತಿರುವ ನಿವೃತ್ತ ಹಿರಿಯ ಪೋಸ್ಟ್‌ಮಾಸ್ಟರ್ ಜಹೀರ್ ಖಾನ್ ಅವರ ಮಗಳು ಮೆಹಕ್ ಅಲಿಯಾಸ್ ಗುಲಾಫ್ಶಾ ಅವರು 2022ರ ಫೆಬ್ರವರಿ 22 ರಂದು ಅಮೀರ್ ಅಲಿಯನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಅಮೀರ್ ಬೇರೆಯರೊಂದಿಗೆ ಮೊಬೈಲ್‌ನಲ್ಲಿ ರಹಸ್ಯವಾಗಿ ಚಾಟ್ ಮಾಡುತ್ತಿದ್ದುದನ್ನು ಮೆಹಕ್ ಗಮನಿಸಿದ್ದು, ಅಮೀರ್ ಯುವತಿಯೊಬ್ಬಳ ಜೊತೆ ಮಾತನಾಡುತ್ತಿರುವುದನ್ನು ಮೆಹಕ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರಂತೆ. ಅಮೀರ್ 2014 ರಿಂದಲೇ ಆ ಯುವತಿ ಜೊತೆ ಸಂಬಂಧ ಹೊಂದಿದ್ದು, ಈಗ ಆ ಯುವತಿ ಅಮೀರ್ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮತಾಂತರ ಮಾಡಿಕೊಳ್ಳುವ ಬಗ್ಗೆ ಘೋಷಣೆ ಮಾಡಿದ ಅಮೀರ್ ಅಲಿ ಅಲಿಯಾಸ್ ಅಮಿತ್ ಮಹೇಶ್ವರಿ ಮನೆಗೆ ಬೀಗ ಹಾಕಿ ಇಡೀ ಕುಟುಂಬದೊಂದಿಗೆ ತಲೆಮರೆಸಿಕೊಂಡಿದ್ದಾನೆ. ಅದೇ ಸಮಯದಲ್ಲಿ, ಆತನ ಪತ್ನಿ ಅಮೀರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೆಹಕ್ ಪತಿ ಬೇರೆ ಯುವತಿಯ ಜೊತೆ ಮಾತನಾಡುತ್ತಿರುವುದರ ಬಗ್ಗೆ ಮೆಹಕ್ ತನ್ನ ತಾಯಿ ಜೊತೆ ಹೇಳಿಕೊಂಡಾಗ, ತಾಯಿನೇ ಮಗಳಿಗೆ ಬುದ್ಧಿ ಹೇಳಿ ಕಳುಹಿಸಿದ್ದರು. ಆದರೆ ನಂತರದಲ್ಲಿ ವಿಷಯ ದೊಡ್ಡದಾಗಿ ಇದೀಗ ಅಮೀರ್ ಅಲಿಯು ಅಮಿತ್ ಮಹೇಶ್ವರಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡು ಹಿಂದೂ ಆಗಲು ಅರ್ಜಿ ಸಲ್ಲಿಸಿದ್ದಾನೆ ಎಂದು ಮೆಹಕ್ ಹೇಳಿದ್ದಾರೆ.
ಅಮೀರ್ ಎಂದಿಗೂ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅವರು ಅತ್ಯಂತ ಕಟ್ಟಾ ಮುಸ್ಲಿಂ ಆಗಿದ್ದು, ಈಗ ಮಾಡುತ್ತಿರುವುದೆಲ್ಲವೂ ಬರೀ ನಾಟಕ. ಅಮೀರ್ ಅಲಿ ಲವ್ ಜಿಹಾದ್ ಆರೋಪವಿಲ್ಲದೆ, ಅಲಿಗಢದಲ್ಲಿ ವಾಸಿಸುವ ತನ್ನ ಹಿಂದೂ ಗೆಳತಿಯನ್ನು ಮದುವೆಯಾಗಲು ಬಯಸಿದ್ದಾನೆ. ಅದಕ್ಕಾಗಿ ಇದೆಲ್ಲಾ ನಾಟಕವಾಡುತ್ತಿದ್ದಾನೆ ಎಂದು ಪತ್ನಿ ದೂರಿದ್ದಾರೆ.
ಈ ದಂಪತಿಗೆ 3 ತಿಂಗಳ ಮಗಳಿದ್ದು, ಧರ್ಮ ಪರಿವರ್ತನೆ ಕಾನೂನನ್ನು ಆಶ್ರಯಿಸಿ ತನಗೆ ಮೋಸ ಮಾಡಿರುವ ಅಮೀರ್ ಅಲಿ ಅಲಿಯಾಸ್ ಅಮಿತ್ ಮಹೇಶ್ವರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮೆಹಕ್ ಮನವಿ ಮಾಡಿದ್ದಾರೆ. ಒಬ್ಬ ಮಗಳಿಗೆ ಮನೆ ಕೊಡಿಸಲು ಯೋಗಿ ಮತ್ತೊಬ್ಬ ಮಗಳ ಮನೆಯನ್ನು ಹಾಳು ಮಾಡುತ್ತಾರಾ ಎಂದು ಮೆಹಕ್ ಮುಖ್ಯಮಂತ್ರಿಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಮೊರಾದಾಬಾದ್ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಸಿಂಗ್ ಮಾತನಾಡಿ, ಮುಸ್ಲಿಂ ಯುವಕನೊಬ್ಬ ತಮ್ಮ ಕಚೇರಿಗೆ ಬಂದು ಹಿಂದೂ ದರ್ಮಕ್ಕೆ ಮತಾಂತರಗೊಳ್ಳಲು ಅಂಚೆ ಮೂಲಕ ಪತ್ರ ಬರೆದಿದ್ದಾನೆ. ಈ ಪತ್ರವನ್ನು ಮೊರಾದಾಬಾದ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಲಾಗಿದೆ. ಅಸಲಿ ವಿಷಯ ಏನೆಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋಹತ್ಯೆ, ಮತಾಂತರ ಕಾಯ್ದೆ ರದ್ದು ಮಾಡದಂತೆ ಕಲಬುರಗಿಯಲ್ಲಿ ಮಠಾಧೀಶರ ಆಗ್ರಹ