ಮುಂಬೈ (ಮಹಾರಾಷ್ಟ್ರ): ಕೊರೊನಾ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಏಪ್ರಿಲ್ 30ರವರೆಗೆ ನಿರ್ಬಂಧಗಳನ್ನು ಮುಂದುವರಿಸಿದೆ. ಆದರೆ ಈ ತಿಂಗಳಲ್ಲಿ ವಿವಿಧ ಹಬ್ಬಗಳಿದ್ದು, ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗುತ್ತದೆ.
ಪವಿತ್ರ ರಂಜಾನ್ ತಿಂಗಳಲ್ಲಿ ಸೀಮಿತ ಸದಸ್ಯರಿಗಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಮುಂಬೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಅವಕಾಶ ನೀಡಲು ಹೈಕೋರ್ಟ್ ನಿರಾಕರಿಸಿದೆ.
ದಕ್ಷಿಣ ಮುಂಬೈನ ಜುಮ್ಮಾ ಮಸೀದಿ ಟ್ರಸ್ಟ್, ಒಂದು ಸಮಯದಲ್ಲಿ ಮಸೀದಿಯಲ್ಲಿ 50 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿಡುವಂತೆ ಮನವಿ ಸಲ್ಲಿಸಿತ್ತು. ಆದರೆ ಮುಂಬೈ ಹೈಕೋರ್ಟ್‌ಗೆ ಅವಕಾಶ ನೀಡಲು ನಿರಾಕರಿಸಿದ್ದು, "ಕೋವಿಡ್ ಗಂಭೀರ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ಜನರ ಸುರಕ್ಷತೆ ಹೆಚ್ಚು ಮುಖ್ಯವಾಗಿದೆ" ಎಂದು ಹೇಳಿದೆ.
ಕೊರೊನಾ ಸೋಂಕನ್ನು ಕಡಿಮೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಬಂಧಗಳನ್ನು ವಿಧಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಆರ್.ಡಿ.ಧನುಕಾ ಮತ್ತು ನ್ಯಾಯಮೂರ್ತಿ ವಿ.ಜಿ. ಬಿಶ್ಟ್ ಅವರಿದ್ದ ನ್ಯಾಯಪೀಠ ಹೇಳಿದೆ.
"ಧಾರ್ಮಿಕ ಆಚರಣೆಗಳು ಮುಖ್ಯ, ಆದರೆ ಸಾರ್ವಜನಿಕ ಸುವ್ಯವಸ್ಥೆ ಮತ್ತು ಜನರ ಸುರಕ್ಷತೆಯೂ ಅತೀ ಮುಖ್ಯ" ಎಂದು ನ್ಯಾಯಾಲಯ ಹೇಳಿದೆ.