ಮುಂಬೈ: ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಎನ್‌ಸಿಬಿಯಿಂದ ಕ್ಲೀನ್ಚಿಟ್ ಪಡೆದಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಅವರ ಪಾಸ್‌ಪೋರ್ಟ್ ಹಿಂತಿರುಗಿಸಲು ಮುಂಬೈನ ವಿಶೇಷ ನ್ಯಾಯಾಲಯ ಒಪ್ಪಿದೆ.
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಭಾಗಿಯಾಗಿದ್ದ ಆರೋಪದ ಮೇಲೆ ವಿಚಾರಣೆಯ ಹಂತದಲ್ಲಿ ವಿದೇಶಕ್ಕೆ ತೆರಳದಂತೆ ಕೋರ್ಟ್ ಸೂಚಿಸಿತ್ತು. ಅಲ್ಲದೇ, ಪಾಸ್‌ಪೋರ್ಟ್ ಕೋರ್ಟ್ ವಶಕ್ಕೆ ನೀಡಲು ಆದೇಶಿಸಿತ್ತು. ಅದರಂತೆ ಆರ್ಯನ್ ಖಾನ್ ಪಾಸ್‌ಪೋರ್ಟ್ ಅನ್ನು ಕೋರ್ಟ್ಗೆ ನೀಡಿದ್ದರು.
ಇದೀಗ ಪ್ರಕರಣದಿಂದ ಖುಲಾಸೆ ಪಡೆದಿದ್ದು, ತನ್ನ ಪಾಸ್‌ಪೋರ್ಟ್ ವಾಪಸ್ ನೀಡಬೇಕು ಎಂದು ಕೋರಿ ಮುಂಬೈ ಸೆಷನ್ಸ್ ನ್ಯಾಯಾಲಯದ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಆರ್ಯನ್ ಅರ್ಜಿ ಸಲ್ಲಿಸಿದ್ದರು.
ಆರ್ಯನ್ ಖಾನ್ ಸಲ್ಲಿಸಿದ್ದ ಅರ್ಜಿಯ ಮೇಲೆ ಎನ್‌ಸಿಬಿಗೆ ಆಕ್ಷೇಪ ಸಲ್ಲಿಸಲು ವಿಶೇಷ ಕೋರ್ಟ್ ಸೂಚಿಸಿತ್ತು. ಎನ್‌ಸಿಬಿಯಿಂದ ಯಾವುದೇ ಆಕ್ಷೇಪಣೆ ವ್ಯಕ್ತವಾಗದ ಕಾರಣ ಕೋರ್ಟ್ ಆರ್ಯನ್ ಖಾನ್‌ಗೆ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಸೂಚಿಸಿದೆ. ಇದರಿಂದ ಆರ್ಯನ್ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ.
ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ವೇಳೆ ದಾಳಿ ನಡೆಸಿದ್ದ ಎನ್‌ಸಿಬಿ ಆರ್ಯನ್ ಖಾನ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಪ್ರಕರಣದಲ್ಲಿ ಕೆಲ ದಿನ ಆರ್ಯನ್ ಖಾನ್ ಜೈಲು ಶಿಕ್ಷೆ ಅನುಭವಿಸಿದ್ದರು. ಇದಾದ ಬಳಿಕ ಎನ್‌ಸಿಬಿ ಆರ್ಯನ್ ಸೇರಿದಂತೆ 6 ಆರೋಪಿಗಳಿಗೆ ಪ್ರಕರಣದಿಂದ ಕ್ಲೀನ್ಚಿಟ್ ನೀಡಿತ್ತು.
ಓದಿ: ಬೆಂಗಳೂರಿನಲ್ಲಿ ಜುಲೈ 1ರಿಂದ ಇದುವರೆಗೆ ಎರಡು ಟನ್ ನಿಷೇಧಿತ ಪ್ಲಾಸ್ಟಿಕ್ ಜಪ್ತಿ, 8 ಲಕ್ಷ ರೂ. ದಂಡ ವಸೂಲಿ