ಭೋಪಾಲ್: ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಸದಾ ಒಂದಿಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಿರುತ್ತಾರೆ. ಸದ್ಯ ಇದೇ ಸಚಿವೆ ಹೊಸ ಹೇಳಿಕೆಯೊಂದನ್ನು ನೀಡಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ತಮ್ಮೊಂದಿಗೆ ಯಾರಾದರೂ ಸೆಲ್ಫಿ ತೆಗೆದುಕೊಳ್ಳಲು ಬಯಸುವವರು 100 ರೂ. ಪಾವತಿಸಬೇಕೆಂದು ಹೇಳಿದ್ದಾರೆ.
ನನ್ನೊಂದಿಗೆ ಯಾರಾದರೂ ಸೆಲ್ಫಿ ತೆಗೆದುಕೊಳ್ಳಲು ಬಯಸುವವರು 100 ರೂ. ಪಾವತಿಸಬೇಕು. ಏಕೆಂದರೆ, ಇಲ್ಲಿ ನನ್ನ ಸಮಯ ವ್ಯರ್ಥವಾಗುತ್ತದೆ. ಹಾಗೆಯೇ, ನನ್ನ ಕಾರ್ಯಕ್ರಮಗಳ ವಿಳಂಬಕ್ಕೆ ಕಾರಣವಾಗುತ್ತದೆ. ಹಾಗಾಗಿ, 100 ರೂ. ಪಾವತಿಸಬೇಕು. ಇದೇ ಹಣವನ್ನು ನಾನು ಬಿಜೆಪಿಯ ಪಕ್ಷದ ಕೆಲಸಕ್ಕಾಗಿ ಠೇವಣಿ ಇಡುವೆ ಎಂದಿದ್ದಾರೆ.
ಖಾಂಡ್ವಾದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ತಾವು ಹೂಗುಚ್ಛಗಳ ಬದಲಾಗಿ ಪುಸ್ತಕಗಳನ್ನು ಸ್ವೀಕರಿಸುವುದಾಗಿ ಪ್ರತಿಪಾದಿಸಿದರು. ಏಕೆಂದರೆ, ಹೂವುಗಳಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಿರುವುದರಿಂದ "ಕಳಂಕವಿಲ್ಲದ" ಭಗವಾನ್ ವಿಷ್ಣುವಿಗೆ ಮಾತ್ರ ಹೂವುಗಳನ್ನು ಅರ್ಪಿಸಬಹುದು ಎಂದರು.
"ಸೆಲ್ಫಿಗಳನ್ನು ಕ್ಲಿಕ್ ಮಾಡುವುದರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ ಮತ್ತು ಆಗಾಗ್ಗೆ ನಾವು ನಮ್ಮ ಕಾರ್ಯಕ್ರಮಗಳಿಗೆ ಗಂಟೆಗಟ್ಟಲೇ ತಡವಾಗಿ ಹೋಗುತ್ತೇವೆ. (ಪಕ್ಷ) ಸಾಂಸ್ಥಿಕ ದೃಷ್ಟಿಕೋನದಿಂದ, ನಾವು ಯಾವುದೇ ವ್ಯಕ್ತಿಯು ಸೆಲ್ಫಿ ಕ್ಲಿಕ್ ಮಾಡಿದರೂ 100 ರೂ. ಪಡೆದು ಬಿಜೆಪಿಯ ಸ್ಥಳೀಯ ಮಂಡಲ ಘಟಕಕ್ಕೆ ನೀಡಲಾಗುವುದು "ಎಂದು ಹೇಳಿದರು.
"ಹೂವುಗಳೊಂದಿಗೆ ಜನರನ್ನು ಸ್ವಾಗತಿಸುವ ಮಟ್ಟಿಗೆ, ಲಕ್ಷ್ಮಿ ದೇವಿಯು ಅವರಲ್ಲಿ ವಾಸಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಕಳಂಕವಿಲ್ಲದ ಭಗವಾನ್ ವಿಷ್ಣು ಹೊರತುಪಡಿಸಿ ಬೇರೆ ಯಾರೂ ಹೂವುಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ, ನಾನು ಹೂಗಳನ್ನು ಸ್ವೀಕರಿಸುವುದಿಲ್ಲ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹೂವಿನ ಪುಷ್ಪಗುಚ್ಚಗಳ ಬದಲು ಪುಸ್ತಕಗಳನ್ನು ಅರ್ಪಿಸಬೇಕೆಂದು ಹೇಳಿದ್ದರು ಅಂತಾ ಸಚಿವೆ ನೆನಪಿಸಿದ್ದಾರೆ.
ಇದನ್ನೂ ಓದಿ : ಕೇಂದ್ರದ ಪೆಟ್ರೋಲಿಯಂ ಆದಾಯವು ಕಳೆದ ವರ್ಷ ಶೇ.45ರಷ್ಟು ಹೆಚ್ಚಳ, ರಾಜ್ಯಗಳ ಆದಾಯ ಕುಸಿತ