ಅಹಮದಾಬಾದ್ (ಗುಜರಾತ್): ತಾಯಿಯೊಬ್ಬಳು ಎರಡು ತಿಂಗಳ ಪುಟ್ಟ ಹೆಣ್ಣು ಮಗುವನ್ನು ಆಸ್ಪತ್ರೆಯ ಮೂರನೇ ಮಹಡಿಯಿಂದ ಎಸೆದಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಆರೋಪಿ ತಾಯಿಯನ್ನು ನಗರದ ಶಾಹಿಬಾಗ್ ಪೊಲೀಸರು ಬಂಧಿಸಿದ್ದಾರೆ. ಮಗು ಅನಾರೋಗ್ಯದಿಂದ ಬಳಲುತ್ತಿದ್ದು ಇದರಿಂದ ಬೇಸತ್ತು ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನವರಿ 1ರಂದು ಮುಂಜಾನೆ 5 ಗಂಟೆ ಸುಮಾರಿಗೆ ಮಗುವಿನ ತಂದೆ ಆಸಿಫ್ ಮಿಯಾ ಮಲಿಕ್ ಆಸ್ಪತ್ರೆಯ ಹೊರಗಿನ ಕೊಠಡಿಯಲ್ಲಿ ಮಲಗಿದ್ದರು. ಪತ್ನಿ ಫರ್ಜಾನಾಬಾನು ಇವರ ಬಳಿ ಬಂದು ಮಗಳು ಅಮರಿನ್ ಬಾನು ಕಾಣುತ್ತಿಲ್ಲ ಎಂದು ತಿಳಿಸಿದ್ದಾಳೆ. ಎಲ್ಲರೂ ಮಗುವಿಗಾಗಿ ಹುಡುಕಾಟ ನಡೆಸಿದ್ದು, ಪತ್ತೆಯಾಗದೇ ಇದ್ದಾಗ ಪೊಲೀಸರಿಗೆ ಕರೆ ಮಾಡಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬೆಳಿಗ್ಗೆ 4.30ರ ಸುಮಾರಿಗೆ ತಾಯಿ ಫರ್ಜಾನಾಬಾನು ಮಗುವಿನೊಂದಿಗೆ ಹೋಗುತ್ತಿರುವುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಮಗುವನ್ನು ಮಹಡಿಯಿಂದ ಎಸೆದ ಬಳಿಕ ಬರಿಗೈಯಲ್ಲಿ ವಾರ್ಡ್‌ಗೆ ಮರಳುತ್ತಿರುವುದು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಆಸಿಫ್ ಮಿಯಾನನ್ನು ಕೇಳಿದಾಗ, ಮಗಳು ಅಮರಿನ್ ಬಾನು ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದಳು. ಈಕೆಯ ಸೇವೆ ಮಾಡಿ ಫರ್ಜಾನಾಬಾನು ನೊಂದಿದ್ದಳು. ಇದರಿಂದಾಗಿ ಈ ರೀತಿ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಫರ್ಜಾನಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಸರಣಿ ಅಪಘಾತ: ಮೃತರ ಸಂಖ್ಯೆ 12 ಕ್ಕೆ ಏರಿಕೆ