ಶಿರಡಿ(ಮಹಾರಾಷ್ಟ್ರ): ಗಂಡ-ಹೆಂಡತಿಯರ ಜಗಳದ ಮಧ್ಯೆ ಕೂಸು ಬಡವಾಯ್ತು ಅನ್ನೋ ಮಾತು ಕೇಳಿದೀವಿ. ಅದು ಇಲ್ಲಿ ನಿಜವಾಗಿದೆ ಮತ್ತು ಕೂಸಿನ ಜೀವವನ್ನೇ ಬಲಿ ಪಡೆದಿದೆ. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತಿ ವ್ಯಕ್ತಪಡಿಸಿದ ಶಂಕೆಯಿಂದ ನಡೆದ ಕಿತ್ತಾಟದಲ್ಲಿ ತಾಯಿಯೊಬ್ಬಳು 5 ತಿಂಗಳ ಹಸುಳೆಯನ್ನು ಹೊಡೆದು, ಬಾವಿಗೆಸೆದು ಜೀವ ತೆಗೆದಿದ್ದಾಳೆ.
ಕೋಪದಲ್ಲಿ ಮಾಡಿದ ಪ್ರಮಾದದಿಂದ ತಪ್ಪಿಸಿಕೊಳ್ಳಲು ಆಕೆ ತನ್ನ ಮಗು ಅಪಹರಣವಾದ ಕಥೆ ಕಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ವಿಚಾರಣೆಯ ವೇಳೆ ನಡೆದ ಘಟನೆಯನ್ನು ಕ್ರೂರಿ ತಾಯಿಯಿಂದಲೇ ಬಯಲಿಗೆಳೆದಿದ್ದಾರೆ. ಮಹಾರಾಷ್ಟ್ರದ ಶಿರಡಿಯ ಕೋಪರಗಾಂವ್ ತಾಲೂಕಿನ ಕಾರ್ವಾಡಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿವರ: ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸೂರಜ್ ಮತ್ತು ಗಾಯತ್ರಿ ಎಂಬುವರಿಗೆ ಈಚೆಗೆ ಮಗು ಜನಿಸಿತ್ತು. ಹಸುಳೆಗೆ ಶಿವಂ ಎಂಬ ಮುದ್ದಾದ ಹೆಸರನ್ನೂ ನಾಮಕರಣ ಮಾಡಲಾಗಿತ್ತು. ಆ ಕಾರ್ಯಕ್ರಮವೂ ಈಚೆಗಷ್ಟೇ ನಡೆದಿತ್ತು. ಇಷ್ಟೆಲ್ಲಾ ಸಂಭ್ರಮದ ಮಧ್ಯೆ ಪತಿಗೆ ತನ್ನ ಪತ್ನಿಯ ಮೇಲೆ ಅನುಮಾನವಿತ್ತು. ಆಕೆ ಇನ್ನೊಬ್ಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿ ಜೊತೆ ಜಗಳ ಕಾಯುತ್ತಿದ್ದ.
ದಿನಂಪ್ರತಿ ನಡೆಯುತ್ತಿದ್ದ ಈ ಜಗಳ ಫೆಬ್ರವರಿ 19 ರಂದು ಅತಿರೇಕಕ್ಕೆ ತಿರುಗಿದೆ. ತನ್ನ ಶೀಲ ಶಂಕಿಸುತ್ತಿದ್ದ ಪತಿಯ ಮೇಲೆ ಮಹಿಳೆ ತೀವ್ರ ಕೋಪಗೊಂಡಿದ್ದಳು. ಇಬ್ಬರ ನಡೆದ ಜಗಳವೂ ನಡೆದಿತ್ತು. ಇದೇ ಕೋಪದಲ್ಲಿದ್ದ ಆಕೆ, ತನ್ನ 5 ತಿಂಗಳ ಕಂದಮ್ಮನ ಮೇಲೆ ಆ ಕೋಪ ತೀರಿಸಿಕೊಂಡಿದ್ದಾಳೆ. ಹಸುಳೆಯನ್ನು ಹೊಡೆದು ಕೋಪದ ಭರದಲ್ಲಿ ಕತ್ತು ಹಿಸುಕಿ ಕೊಂದು ಮನೆಯ ಪಕ್ಕದಲ್ಲಿದ್ದ ಬಾವಿಗೆ ಬಿಸಾಡಿದ್ದಾಳೆ.
ಅಪಹರಣ ಕಥೆ: ಕೋಪದಲ್ಲಿ ಮಾಡಿದ ಅಚಾತುರ್ಯದಿಂದ ತಾನು ತಪ್ಪಿಸಿಕೊಳ್ಳಬೇಕು ಎಂದು ತಾಯಿ ಉಪಾಯ ಹೂಡಿದ್ದಾಳೆ. ಮಗುವನ್ನು ಯಾರೋ ಇಬ್ಬರು ಅಪರಿಚಿತರು ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದಾಳೆ. ಗಾಬರಿಗೊಂಡ ಕುಟುಂಬಸ್ಥರು ಇಡೀ ಗ್ರಾಮವನ್ನು ಹುಡುಕಾಡಿಸಿದ್ದಾರೆ. ಕಂಡವರನ್ನೆಲ್ಲ ಮಗುವವಿನ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಮಗು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಅನುಮಾನ ಬಂದವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾಯಿಯನ್ನೂ ವಿಚಾರಿಸಿದ್ದಾರೆ. ಪತಿ ಪತ್ನಿಯರ ಮಧ್ಯೆ ಜಗಳವೂ ನಡೆದಿ ಕಾರಣ ಈಕೆಯ ಮೇಲೆ ಪೊಲೀಸರು ಅನುಮಾನಪಟ್ಟಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಕ್ರೂರಿ ತಾಯಿ ಮಾಡಿದ ಅನಾಗರಿಕ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಪತಿ ತನ್ನನ್ನು ನಿಂದಿಸಿದ ಕೋಪದಲ್ಲಿದ್ದ ವೇಳೆ ಮಗುವನ್ನು ಹೊಡೆದು ಕತ್ತು ಹಿಸುಕಿ ಬಾವಿಗೆ ಬಿಸಾಡಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಬಾವಿಯನ್ನು ಪರಿಶೀಲಿಸಿದಾಗ ತಾಯಿ ಮಾಡಿದ ಅನ್ಯಾಯಕ್ಕೆ ಹಸುಳೆ ನೀರಿನಲ್ಲಿ ತೇಲಿ ಪ್ರಾಣ ಬಿಟ್ಟಿದ್ದು ಕಂಡಿದೆ. ಮಗುವಿನ ಕಳೆಬರಹವನ್ನು ವಶಕ್ಕೆ ಪಡೆದ ಪೊಲೀಸರು ತಾಯಿಯ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್ ನುಂಗಿದ ಕೈದಿ: ಬಳಿಕ ಏನಾಯ್ತು ಗೊತ್ತಾ?