ಮಲಪ್ಪುರಂ, ಕೇರಳ: ಪಿಎಸ್‌ಸಿ ಪರೀಕ್ಷೆಯಲ್ಲಿ ತಾಯಿ ಮತ್ತು ಮಗ ಸಾಧನೆ ಮಾಡಿದ್ದಾರೆ. ಇಬ್ಬರೂ ಒಂದೇ ಬಾರಿ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅರಿಕೋಡ್ ನಿವಾಸಿ ಬಿಂದು ಮತ್ತು ಅವರ ಪುತ್ರ ವಿವೇಕ್ ಈ ಅಪರೂಪದ ಸಾಧನೆ ಮಾಡಿದವರು. ನಿನ್ನೆ ಪ್ರಕಟವಾದ ಎಲ್ಜಿಎಸ್ ರ‍್ಯಾಂಕ್ ಪಟ್ಟಿಯಲ್ಲಿ ಮಲಪ್ಪುರಂ ಜಿಲ್ಲೆಯಿಂದ ಬಿಂದು 92ನೇ ರ‍್ಯಾಂಕ್ ಹಾಗೂ ಪುತ್ರ ವಿವೇಕ್ ಎಲ್ಡಿಸಿಯಿಂದ 38ನೇ ರ‍್ಯಾಂಕ್ ಗಳಿಸಿದ್ದಾರೆ. ಇಬ್ಬರೂ ಅರಿಕೋಡ್ ಪಿಎಸ್‌ಸಿ ಕೋಚಿಂಗ್ ಸೆಂಟರ್‌ನ ಅಭ್ಯರ್ಥಿಗಳು ಎಂಬುದು ವಿಶೇಷ..
ಬಿಂದು ಕಳೆದ ಏಳು ವರ್ಷಗಳಲ್ಲಿ ಎರಡು ಬಾರಿ LDC ಮತ್ತು LGS ಪರೀಕ್ಷೆ ಬರೆದಿದ್ದೆರು. ಇದರಲ್ಲಿ ಕಳೆದ ಎಲ್ಜಿಎಸ್ ಪರೀಕ್ಷೆಯ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಕೋಚಿಂಗ್ ಸೆಂಟರ್ಗೆ ಹೋದರೂ ಸಹ ಇವರು ಬಿಡುವಿನ ವೇಳೆಯನ್ನೆಲ್ಲ ಅಧ್ಯಯನಕ್ಕೆ ಮೀಸಲಿಟ್ಟಿದ್ದರು. ಸರ್ಕಾರಿ ನೌಕರಿ ಪಡೆಯುವ ಕನಸು ಇದಕ್ಕೆ ಕಾರಣವಾಯಿತು ಎನ್ನುತ್ತಾರೆ ಬಿಂದು.

ಇದಲ್ಲದೇ ಐಸಿಡಿಸಿ ಸೂಪರಿಂಟೆಂಡೆಂಟ್ ಪರೀಕ್ಷೆ ಬರೆದಿರುವ ಬಿಂದು ಇದರಲ್ಲೂ ರ‍್ಯಾಂಕ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಬಿಂದು ಕಳೆದ ಹನ್ನೊಂದು ವರ್ಷಗಳಿಂದ ಅರಿಕೋಡು ಮಟಕ್ಕೋಡು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2019-20ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಶಿಕ್ಷಕಿಯಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ರ‍್ಯಾಂಕ್ ಪಟ್ಟಿ ಪ್ರಕಟವಾದಾಗ ತಾಯಿ-ಮಗ ಇಬ್ಬರೂ ಪಿಎಸ್‌ಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕುಟುಂಬಕ್ಕೆ ದುಪ್ಪಟ್ಟು ಸಂತೋಷವಾಗಿದೆ ಎನ್ನುತ್ತಾರೆ ಬಿಂದು.
ತಾಯಿ ಬಿಂದುವಿನಂತೆ ಮಗ ವಿವೇಕ್‌ನ ಗುರಿ ಸರ್ಕಾರಿ ನೌಕರಿ ಮಾಡುವುದಾಗಿತ್ತು. ಎರಡೂವರೆ ವರ್ಷಗಳ ಪರಿಶ್ರಮ ವಿವೇಕ್ ಅವರನ್ನು ಯಶಸ್ಸಿನತ್ತ ಕರೆತಂದಿತು. ತನ್ನ ಯಶಸ್ಸಿನ ಹಿಂದೆ ತಾಯಿಯ ಸ್ಫೂರ್ತಿ ಮತ್ತು ಪ್ರೋತ್ಸಾಹವಿದೆ. ಮೊದಲ ಪ್ರಯತ್ನದಲ್ಲೇ ರ‍್ಯಾಂಕ್ ಬಂದಿರುವುದು ತುಂಬಾ ಖುಷಿ ತಂದಿದೆ ಎಂದು ವಿವೇಕ್ ಹೇಳಿದ್ದಾರೆ.
ಬಿಂದು ಅವರ ಪತಿ ಚಂದ್ರನ್ ಅವರು ಎಡಪಾಲ ಕೆಎಸ್‌ಆರ್‌ಟಿಸಿ ಡಿಪೋ ಉದ್ಯೋಗಿ. ಈ ದಂಪತಿಗೆ ಹೃದ್ಯ ಎಂಬ ಮಗಳೂ ಇದ್ದಾರೆ. ಈಗ ತಾಯಿ ಮತ್ತು ಮಗ ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬವಿದೆ.
ಓದಿ: 6 ವರ್ಷದ ನಂತರ ತಾಯಿ-ಮಗ ಒಂದುಗೂಡಲು ಇದುವೇ 'ಆಧಾರ'.. ಬೆಂಗಳೂರು ಟು ನಾಗಪುರ..