ಭಂಡಾರಾ( ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲಿನಿಂದ ಬಿದ್ದು ತಾಯಿ- ಮಗ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಭಂಡಾರದಲ್ಲಿ ನಡೆದಿದೆ. ನಾಗ್ಪುರದಿಂದ ಮಧ್ಯಪ್ರದೇಶದ ರೇವಾಕ್ಕೆ ರೈಲು ತೆರಳುತ್ತಿತ್ತು.
ಭಂಡಾರ ಜಿಲ್ಲೆಯ ದೇವಡ-ಮಡ್ಗು ವೈಗಂಗಾ ನದಿಯ ಸೇತುವೆ ಮೇಲೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. 27 ವರ್ಷದ ಪೂಜಾ ಇಶಾಂತ್ ರಾಮ್ಟೆಕೆ ಹಾಗೂ ಈಕೆಯ18 ತಿಂಗಳ ಮಗು ಅಥರ್ವ ಮೃತಪಟ್ಟವರು.
ನಾಗ್ಪುರದ ತೆಕನಾಕಾ ಪ್ರದೇಶದವರಾದ ಪೂಜಾ ಮತ್ತು ಇಶಾಂತ್ ರಾಮ್ಟೆಕೆ ಮಧ್ಯಪ್ರದೇಶದ ರೇವಾದಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ರೈಲು ತುಮ್ಸಾರ್ ರೈಲು ನಿಲ್ದಾಣದ ಬಳಿ ಇದ್ದಾಗ, ಪತ್ನಿ ಮಗುವಿನೊಂದಿಗೆ ವಾಶ್ ರೂಂಗೆ ಹೋಗಿದ್ದರು. ಆದರೆ, ವಾಪಸ್ ಬಂದಿರಲಿಲ್ಲ.
ಇದರಿಂದ ಗಾಬರಿಗೊಳಗಾದ ಇಶಾಂತ್, ಗೊಂಡಿಯಾ ರೈಲು ನಿಲ್ದಾಣದಲ್ಲಿ ದೂರು ದಾಖಲಿಸಿದ್ದರು. ಪತ್ನಿ ಮತ್ತು ಮಗುವಿಗಾಗಿ ಇಶಾಂತ್ ರಾಮ್ಟೆಕೆ ಹಲವು ಬಾರಿ ಹುಡುಕಾಡಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ.
ಇಶಾಂತ್ ದೂರಿನ ಬಳಿಕ ಪೊಲೀಸರು, ರಾಮ್ಟೆಕೆ ಪತ್ನಿ ಮತ್ತು ಮಗುವಿಗಾಗಿ ಹುಡುಕಾಟ ನಡೆಸಿದ್ದರು. ರೈಲ್ವೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಸೇತುವೆ ಮೇಲೆ ನೇತಾಡುತ್ತಿದ್ದ ಮಹಿಳೆಯ ಶವ ಹಾಗೂ ಮಧ್ಯಾಹ್ನ 12 ಗಂಟೆ ಸುಮಾರಿಗೆ ವೈಗಂಗಾ ನದಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರು ಹಾಗೂ ಕರಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೂಜಾ ಮತ್ತು ಮಗು ರೈಲಿನಿಂದ ಬಿದ್ದಿದ್ದು ಹೇಗೆ?
ವಾಶ್ ರೂಂಗೆ ಹೋಗುವಾಗ ಮಗು ಆಯತಪ್ಪಿ ನದಿಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರೈಲಿನಿಂದ ಮಗು ಅಥರ್ವ ಕೆಳಗೆ ಬಿದ್ದಾಗ ಕಾಪಾಡಲು ಮುಂದಾದ ಪೂಜಾ ಸಹ ಕೆಳಗೆ ಬಿದ್ದಿರಬೇಕು ಎಂದು ಪೊಲೀಸರು ಊಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರೈತರು, ವರ್ತಕರೇ ಇವರ ಟಾರ್ಗೆಟ್.. ಮಾರಕಾಸ್ತ್ರ ತೋರಿಸಿ ಒಡವೆ, ಹಣ ಎಗರಿಸುತ್ತಿದ್ದ ಖದೀಮರು ಅಂದರ್!