ತಂಜಾವೂರ್(ತಮಿಳುನಾಡು): ಮನೆಯೊಳಗೆ ನುಗ್ಗಿದ ಮಂಗವೊಂದು ಎರಡು ನವಜಾತ ಶಿಶುಗಳನ್ನು ಹೊತ್ತೊಯ್ದಿದೆ. ಒಂದು ಮಗು ಮೃತಪಟ್ಟಿದ್ದು, ಇನ್ನೊಂದು ಮಗುವನ್ನು ರಕ್ಷಿಸಲಾಗಿದೆ.
ತಮಿಳುನಾಡಿನ ತಂಜಾವೂರಿನಲ್ಲಿ ಇಂತಹದೊಂದು ಆಘಾತಕಾರಿ ಘಟನೆ ನಡೆದಿದೆ. ವರ್ಣಚಿತ್ರಕಾರನಾಗಿರುವ ರಾಜ ಎಂಬುವರು ತಮ್ಮ ಪತ್ನಿ ಭುವನೇಶ್ವರಿಯೊಂದಿಗೆ ತಂಜಾವೂರಿನ ಹನುಮಾನ್ ದೇವಸ್ಥಾನದ ಬಳಿ ವಾಸವಾಗಿದ್ದಾರೆ. ಕಳೆದ ವಾರ ಭುವನೇಶ್ವರಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಇಂದು ಬೆಳಗ್ಗೆ ಮಕ್ಕಳು ನಿದ್ರೆಗೆ ಜಾರಿದ್ದ ವೇಳೆ ಭುವನೇಶ್ವರಿ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳಲು ಮನೆ ಹೊರಗಡೆ ಹೋಗಿದ್ದಾರೆ. ಈ ವೇಳೆ ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ಒಳಗೆ ನುಗ್ಗಿದ ಮಂಗ ಮೊದಲು ಒಂದು ಮಗುವನ್ನು ಒಯ್ದು ಮನೆಯ ಸಮೀಪ ಇಟ್ಟಿದೆ. ಮತ್ತೆ ಒಳಗೆ ಬಂದು ಇನ್ನೊಂದು ಮಗುವನ್ನ ಹೊತ್ತೊಯ್ಯುವ ವೇಳೆ ಭುವನೇಶ್ವರಿ ಮಂಗವನ್ನು ನೋಡಿದ್ದು, ಜೋರಾಗಿ ಕಿರುಚಿದ್ದಾರೆ.
ಇದನ್ನೂ ಓದಿ: ಇಂಡೋ - ಪಾಕ್ ಗಡಿಯಲ್ಲಿ ನುಸುಳುಕೋರನ ಹತ್ಯೆ: 70 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ
ಇದನ್ನು ಕೇಳಿ ಸ್ಥಳೀಯರು ಮಂಗವನ್ನು ಬೆನ್ನಟ್ಟಿದ್ದು, ಕೊಳವೊಂದರ ಬಳಿ ಮಗುವನ್ನು ಬಿಟ್ಟು ಮಂಗ ಓಡಿ ಹೋಗಿದೆ. ಆ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕಂದಮ್ಮ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡಿರುವ ಹನುಮಾನ್ ದೇವಸ್ಥಾನದ ಬಳಿ ವಾಸಿಸುವ ಜನರು, ಅಲ್ಲಿ ಇರುವ ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.