ರಾಂಚಿ, ಜಾರ್ಖಂಡ್: ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ಡಿಸೆಂಬರ್ 7ರವರೆಗೆ ತೆಗೆದುಕೊಳ್ಳುವಂತಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ.
ಈ ಮೊದಲೇ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ಆದೇಶವಿದ್ದು, ಆ ಆದೇಶವನ್ನೇ ಜಾರ್ಖಂಡ್ ಹೈಕೋರ್ಟ್ ವಿಸ್ತರಣೆ ಮಾಡಿದೆ. ಈ ಮೂಲಕ ರಾಹುಲ್ ಗಾಂಧಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.
ಮೋದಿ ಎಂಬ ಉಪನಾಮ (Surname) ಇಟ್ಟುಕೊಂಡವರು ಕಳ್ಳರು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, ಈ ಹೇಳಿಕೆಯ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣ ವಿಚಾರಣೆ ಈಗ ನಡೆಯುತ್ತಿದೆ.
ಈ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಕೂಡಾ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಏನಿದು ಸರ್ನೇಮ್ ಪ್ರಕರಣ..?
2019ರ ಏಪ್ರಿಲ್ 13ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, 'ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಇವರೆಲ್ಲರೂ 'ಮೋದಿ'ಎಂಬುದನ್ನು ಸಾಮಾನ್ಯ ಉಪನಾಮವಾಗಿ ಹೊಂದಿದ್ದಾರೆ. ಈ ರೀತಿಯ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು' ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಮೋದಿ ಎಂಬ ಹೆಸರಿಗೆ ಹಾನಿ ತಂದ ಆರೋಪದಲ್ಲಿ ಅಡ್ವೋಕೇಟ್ ಪ್ರದೀಪ್ ಮೋದಿ ಎಂಬುವವರು ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್ 2020 ಫೆಬ್ರವರಿಯಲ್ಲಿ ರಾಹುಲ್ ಗಾಂಧಿಗೆ ಆಂತರಿಕ ರಕ್ಷಣೆ ನೀಡುವುದ ಜೊತೆಗೆ, ರಾಹುಲ್ ಗಾಂಧಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಹಾಗಿಲ್ಲ ಎಂದು ಆದೇಶ ನೀಡಿತ್ತು.
ಈಗ ಮತ್ತೊಮ್ಮೆ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್ನ ಜಸ್ಟೀಸ್ ಎಸ್.ಕೆ.ದ್ವಿವೇದಿ ಡಿಸೆಂಬರ್ 7ರವರೆಗೆ ರಾಹುಲ್ ಗಾಂಧಿ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವಂತಿಲ್ಲ ಎಂದಿದ್ದು, ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್: ಕುಲ್ಗಾಂನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ