ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸೋನಿಯಾರಿಗೆ ಇಡಿ ಸಮನ್ಸ್ ನೀಡಿದ್ದನ್ನು ಖಂಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸೋನಿಯಾರಿಗೆ ಯಾವ ಕಾರಣಕ್ಕೆ ಸಮನ್ಸ್ ನೀಡಲಾಗಿದೆ ಎಂಬುದನ್ನು ಮೊದಲಿಗೆ ತನಿಖಾ ಸಂಸ್ಥೆ ಬಹಿರಂಗಪಡಿಸಲಿ ಎಂದಿದ್ದಾರೆ. ಇಡಿ ಖುದ್ದಾಗಿ ಸೋನಿಯಾರ ಮನೆಗೆ ಹೋಗಿ ತನ್ನ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದಿತ್ತು ಎಂದು ಅವರು ಹೇಳಿದ್ದಾರೆ.
ಇಡಿ ಈ ಹಿಂದೆ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಿದ್ದನ್ನು ಪ್ರಸ್ತಾಪಿಸಿದ ಗೆಹ್ಲೋಟ್, ಸತತ ಐದು ದಿನಗಳವರೆಗೆ ಪ್ರತಿದಿನ ಅಷ್ಟೊಂದು ಸುದೀರ್ಘ ಅವಧಿಗೆ ಈ ಹಿಂದೆ ಯಾವ ನಾಯಕರನ್ನೂ ವಿಚಾರಣೆ ನಡೆಸಿದ ಉದಾಹರಣೆ ಇಲ್ಲ. ಮನೋಸ್ಥೈರ್ಯ ಕುಗ್ಗಿಸುವುದು ಹಾಗೂ ಸಮಸ್ಯೆಗಳನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತಾರೂಢ ಬಿಜೆಪಿ ಸರ್ಕಾರವು ಇಡಿಯನ್ನು ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ದೊಡ್ಡ ಅಸ್ತ್ರವಾಗಿ ಬಳಸುತ್ತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದೂ ಇರಲಾರದು. ಇಡಿ 1,700 ದಾಳಿಗಳನ್ನು ಮಾಡಿದೆಯಾದರೂ, ಅದರಲ್ಲಿ ಶಿಕ್ಷೆಯ ಪ್ರಮಾಣ ಶೇ 0.5 ದಷ್ಟು ಮಾತ್ರ ಇದೆ. ಸೂಕ್ತ ಕಾನೂನಿನ ಪ್ರಕ್ರಿಯೆಯಂತೆ ಇಡಿ ಕೆಲಸ ಮಾಡದಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಈ ಮಧ್ಯೆ ಕಾಂಗ್ರೆಸ್ ಮುಖ್ಯಕಚೇರಿ ಪ್ರವೇಶಿಸಲು ಮಾಧ್ಯಮದವರಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವರ ಆದೇಶಗಳನ್ನು ಪಾಲಿಸುತ್ತಿರುವ ದೆಹಲಿ ಪೊಲೀಸರು, ಇಂದು ಬೆಳಗಿನ ಜಾವದಿಂದಲೇ ಮಾಧ್ಯಮದವರು ಕಾಂಗ್ರೆಸ್ ಮುಖ್ಯ ಕಚೇರಿ ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಇಂಥ ದಮನಕಾರಿ ನೀತಿಯು ನಿರೀಕ್ಷಿತವೇ ಆಗಿದ್ದು, ಇದು ಮೋದಿ ಸರ್ಕಾರದ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬೆಲೆಯೇರಿಕೆ ಮತ್ತು ನಿರುದ್ಯೋಗದಂತಹ ಸಾರ್ವಜನಿಕರ ಸಮಸ್ಯೆಗಳನ್ನು ಕಾಂಗ್ರೆಸ್ ಪ್ರಶ್ನಿಸದಂತೆ ತಡೆಯಲು ಇಡಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.