ಹೈದರಾಬಾದ್: ಕೇಂದ್ರ ಸರ್ಕಾರದಿಂದ ಮನೆಯಲ್ಲೇ ಕುಳಿತುಕೊಂಡು 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶವೊಂದು ಒದಗಿ ಬಂದಿದೆ. ಈ ವಿಚಾರವಾಗಿ ಕೇಂದ್ರ ಹಣಕಾಸು ಇಲಾಖೆ My Gov India ಅಧಿಕೃತ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಕೇಂದ್ರ ಸರ್ಕಾರದಿಂದ ಹೊಸದಾಗಿ ಆರಂಭಗೊಂಡಿರುವ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಗಾಗಿ ಕೇಂದ್ರ ಸರ್ಕಾರ ವಿಭಿನ್ನ ಲೋಗೋ ಹಾಗೂ ಟ್ಯಾಗ್ ಲೈನ್ ಹುಡುಕುತ್ತಿದೆ. ಇದೀಗ ಜನಸಾಮಾನ್ಯರು ಮನೆಯಿಂದಲೇ ಕ್ರಿಯೆಟಿವ್ ಆಗಿ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ನೀಡಿ 15 ಲಕ್ಷ ರೂ. ಬಹುಮಾನ ಗೆಲ್ಲಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಆಗಸ್ಟ್ 15 ಕೊನೆಯ ದಿನವಾಗಿದ್ದು, ಅದರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಡಿಎಫ್‌ಐಗಾಗಿ ವಿಶೇಷವಾದ ಹೆಸರು, ಟ್ಯಾಗ್‌ಲೈನ್ ಹಾಗೂ ಲೋಗೋ ನಿರ್ಮಾಣ ಮಾಡುವವರಿಗೆ ಈ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಇದರಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವವರಿಗೆ 5 ಲಕ್ಷ ರೂ.ಎರಡನೇ ಸ್ಥಾನಕ್ಕೆ 3 ಲಕ್ಷ ಹಾಗೂ ಮೂರನೇ ಸ್ಥಾನಕ್ಕೆ 2 ಲಕ್ಷ ರೂ ನಿಗದಿ ಮಾಡಲಾಗಿದೆ.
ಅಭಿವೃದ್ಧಿ ಹಣಕಾಸು ಸಂಸ್ಥೆ ಗಮನದಲ್ಲಿಟ್ಟುಕೊಂಡು ಈ ಹೆಸರು, ಟ್ಯಾಗ್‌ಲೈನ್ ಹಾಗೂ ಲೋಗೋ ವಿನ್ಯಾಸಗೊಳ್ಳಬೇಕಾಗಿದ್ದು, ನೋಡಲು ಹಾಗೂ ಉಚ್ಚಾರ ಮಾಡಲು ಸುಲಭವಾಗಿರಬೇಕು ಎಂದು ಸಂಸ್ಥೆ ತಿಳಿಸಿದೆ. my gov.in ಪೋರ್ಟಲ್ಗೆ ಹೋಗಿ ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿವರ ತುಂಬಬೇಕು.
ಹೆಸರು, ಟ್ಯಾಗ್‌ಲೈನ್ ಹಾಗೂ ಲೋಗೋ ಮೂರು ವಿಭಾಗಕ್ಕೂ ಬಹುಮಾನ ನಿಗದಿ ಮಾಡಲಾಗಿದ್ದು, ಪ್ರಥಮ, ದ್ವಿತೀಯ ಹಾಗೂ ಮೂರನೇ ಸ್ಥಾನ ಇರಲಿದೆ. ಹೆಚ್ಚಿನ ಮಾಹಿತಿಗಾಗಿ https://www.mygov.in/task/name-tagline-and-logo-contest-development-financial-institution ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ವಿಶೇಷವೆಂದರೆ 2014ರಲ್ಲಿ ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಗೋಸ್ಕರ ಹಣಕಾಸು ಇಲಾಖೆ ಇದೇ ರೀತಿಯ ಸ್ಪರ್ಧೆ ನಡೆಸಿತ್ತು ಎಂಬುದು ಗಮನಾರ್ಹ ಸಂಗತಿ.