ಅಗರ್ತಲಾ (ತ್ರಿಪುರಾ): ಬಂಧಿತ ಎನ್ಎಲ್ಎಫ್ಟಿ (ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ)ಗೆ ಸೇರಿದ ಯುವಕರನ್ನು ರಿಲೀಸ್ ಮಾಡುವಂತೆ ಆಗ್ರಹಿಸಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ.
ತ್ರಿಪುರದ ಧಲೈ ಜಿಲ್ಲೆಯ ಗಂಗಾನಗರ ಪೊಲೀಸ್ ಠಾಣೆಯ ಮೇಲೆ ಕೆಲವರು ದಾಳಿ ನಡೆಸಿದ್ದು, ಪರಿಣಾಮ ಐವರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.
ನಿಷೇಧಿತ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ ಮೂವರು ಬಂಧಿತರನ್ನ ತಕ್ಷಣವೇ ರಿಲೀಸ್ ಮಾಡುವಂತೆ ಈ ವೇಳೆ ಒತ್ತಾಯಿಸಲಾಗಿದೆ. ಆರಂಭದಲ್ಲಿ ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಮೂರು ವಾಹನ ಧ್ವಂಸಗೊಳಿಸಲಾಗಿದ್ದು, ಇದಾದ ಬಳಿಕ ದರೋಡೆಗೆ ಸಹ ಯತ್ನಿಸಲಾಗಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಧಲೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್, ಉಗ್ರಗಾಮಿ ಸಂಬಂಧಿತ ಪ್ರಕರಣದಲ್ಲಿ ಮೂವರ ಬಂಧನ ಮಾಡಲಾಗಿದೆ ಎಂದಿದ್ದಾರೆ. ಈಗಾಗಲೇ ಅವರ ವಿಚಾರಣೆ ಆರಂಭಿಸಲಾಗಿದ್ದು, ಕೆಲವೊಂದು ಪುರಾವೆ ಪಡೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಇವರ ಬಂಧನ ಮಾಡುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮೂವರು ಯುವಕರನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅವರ ಮನವೊಲಿಕೆ ಯತ್ನ ನಡೆಸಲಾದ್ರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಅವರನ್ನ ಬಲವಂತವಾಗಿ ಬಿಡುಗಡೆ ಮಾಡಲು ಇವರು ಪ್ರಯತ್ನಿಸಿದ್ದು, ಕೆಲವರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದರು. ಹೀಗಾಗಿ ಅಶ್ರವಾಯು ಬಳಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ. ಬೈರೆನ್‌ಜೋಯ್ ರಿಯಾಂಗ್, ಥೋಮರಾಯ್ ರಿಯಾಂಗ್ ಮತ್ತು ಧನಂಜಾಯ್ ರಿಯಾಂಗ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.