ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ವಕ್ತಾರ ಮತ್ತು ಮಾಜಿ ಕಾರ್ಪೊರೇಟರ್ ಸಂದೀಪ್ ದೇಶಪಾಂಡೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಶುಕ್ರವಾರ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಬೆಳಗಿನ ವಾಕ್ ಮಾಡುವಾಗ ಅವರ ಮೇಲೆ ಅಪರಿಚಿತರು ಕ್ರಿಕೆಟ್ ಸ್ಟಂಪ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದಾಗ ದೇಶಪಾಂಡೆ ಒಬ್ಬರೇ ಇದ್ದರು. ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಹಿಂದೂಜಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆಕೋರರ ಗುರುತು ಇನ್ನೂ ಪತ್ತೆಯಾಗಿಲ್ಲ ಮತ್ತು ಹಲ್ಲೆಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ದೇಶಪಾಂಡೆಯವರ ಪಕ್ಷದ ಸಹೋದ್ಯೋಗಿ ಸಂತೋಷ್ ಧುರಿ, ನಾವೆಲ್ಲರೂ ಪ್ರತಿದಿನ ಉದ್ಯಾನವನದಲ್ಲಿ ಬೆಳಗ್ಗೆ ವಾಕ್ ಮಾಡಲು ಬರುತ್ತೇವೆ. ಇಂದು ದೇಶಪಾಂಡೆ ನಮ್ಮೆಲ್ಲರಿಗಿಂತ ಬೇಗನೆ ಬಂದಿದ್ದರು ಮತ್ತು ಅವರು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಸ್ಟಂಪ್‌ಗಳಿಂದ ಹಲ್ಲೆ ನಡೆಸಿದೆ. ಕಳೆದ ಕೆಲ ದಿನಗಳಿಂದ ಬೆಳಗಿನ ವಾಕಿಂಗ್ ವೇಳೆ ಅವರ ಚಲನವಲನವನ್ನು ಗಮನಿಸುತ್ತಿದ್ದ ಗುಂಪು ಏಕಾಂಗಿಯಾಗಿದ್ದ ಅವರ ಮೇಲೆ ಹಲ್ಲೆ ನಡೆಸಿದೆ. ದೇಶಪಾಂಡೆ ಯಾರೊಂದಿಗೂ ವೈಯಕ್ತಿಕ ದ್ವೇಷವನ್ನು ಹೊಂದಿರಲಿಲ್ಲ ಎಂದು ಹೇಳಿದರು.
ದೇಶಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು, ಇದರಲ್ಲಿ ತಮ್ಮ ಪಕ್ಷದ ಪ್ರಚಾರ ಮಾಡುತ್ತಾರೆ. ಅಲ್ಲದೆ ರಾಜಕೀಯ ವಿರೋಧಿಗಳನ್ನು ಎದುರಿಸಲು ಕೂಡ ಅವರು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಸಂದೀಪ್ ದೇಶಪಾಂಡೆ ಅವರನ್ನು ದಾದರ್‌ನ ಹಿಂದೂಜಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಮನವೀಸೆ ಅಧ್ಯಕ್ಷ ಅಮಿತ್ ಠಾಕ್ರೆ, ಮುಖಂಡ ನಿತಿನ್ ಸರ್ದೇಸಾಯಿ ಹಿಂದೂಜಾ ಆಸ್ಪತ್ರೆಗೆ ಭೇಟಿ ನೀಡಿ ದೇಶಪಾಂಡೆಯವರ ಆರೋಗ್ಯ ವಿಚಾರಿಸಿದರು. ಸೂಕ್ತ ಚಿಕಿತ್ಸೆ ಬಳಿಕ ಸಂದೀಪ್ ದೇಶಪಾಂಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಘಟನೆಯ ತನಿಖೆಗಾಗಿ ಪೊಲೀಸ್ ತಂಡ ತನಿಖೆಗಾಗಿ ಸಂದೀಪ್ ದೇಶಪಾಂಡೆ ಮನೆಗೆ ಭೇಟಿ ನೀಡಿದೆ. ಏತನ್ಮಧ್ಯೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂದೀಪ್ ದೇಶಪಾಂಡೆ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂದೀಪ್ ದೇಶಪಾಂಡೆ ಅವರಿಗೆ ಏಕನಾಥ್ ಶಿಂಧೆ ಭರವಸೆ ನೀಡಿದ್ದಾರೆ. ಈ ಹಲ್ಲೆಯ ನಂತರ ಸಂದೀಪ್ ದೇಶಪಾಂಡೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈ ದಾಳಿಯಿಂದ ನಾನು ಹೆದರುವುದಿಲ್ಲ. ಭ್ರಷ್ಟಾಚಾರ ತೊಲಗಲಿದೆ. ನಾವು ಯಾರಿಗೂ ಭಿಕ್ಷೆ ಬೇಡುತ್ತಿಲ್ಲ. ಈ ಘಟನೆಯ ಹಿಂದೆ ಇರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಎಂಎನ್‌ಎಸ್ ಮಾಜಿ ಶಾಸಕ ನಿತಿನ್ ಸರ್ದೇಸಾಯಿ ಮಾತನಾಡಿ, ಸಂದೀಪ್ ದೇಶಪಾಂಡೆ ಮೇಲೆ ದಾಳಿ ಮಾಡಿದ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಬೇಕು. ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ದಾಳಿಕೋರರನ್ನು ಬಂಧಿಸಿ ಅವರ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು. ಶಿವಾಜಿ ಪಾರ್ಕ್‌ನಂತಹ ಜಾಗದಲ್ಲಿ ಹೀಗಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಕಡಬ: ಕರ್ತವ್ಯನಿರತ ಅರಣ್ಯ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ; 7 ಮಂದಿ ಬಂಧನ