ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಸಿಎಂ ನಿವಾಸಕ್ಕೆ ನುಗ್ಗಿರುವ ಆತಂಕಕಾರಿ ಘಟನೆ ನಡೆದಿದೆ.
ಕೋಲ್ಕತ್ತಾದ ಕಾಳಿಘಾಟ್‌ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ನಿವಾಸವಿದೆ. ಈ ನಿವಾಸಕ್ಕೆ ಶನಿವಾರ-ಭಾನುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಮನೆಯ ಗೋಡೆ ಏರಿ ಒಳಗಡೆ ಹೋಗಿದ್ದಾನೆ. ಅಲ್ಲದೇ, ಸಿಎಂ ನಿವಾಸದಲ್ಲೇ ರಾತ್ರಿಯಿಡೀ ನಿಶಬ್ಧವಾಗಿ ಕುಳಿತಿದ್ದ ಎನ್ನಲಾಗ್ತಿದೆ. ಬೆಳಗ್ಗೆ ಭದ್ರತಾ ಸಿಬ್ಬಂದಿ ಆತನನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಸಿಎಂ ಮಮತಾ ನಿವಾಸ ಭಾರಿ ಭದ್ರತಾ ವಲಯದಲ್ಲಿದೆ. ಅವರಿಗೆ 'ಝೆಡ್ ಪ್ಲಸ್' ಭದ್ರತೆಯೂ ಇದೆ. ಆದರೂ, ಮಧ್ಯರಾತ್ರಿಯಲ್ಲಿ ವ್ಯಕ್ತಿ ಸಿಎಂ ಮನೆಗೆ ಹೇಗೆ ಪ್ರವೇಶಿಸಿದ್ದಾನೆ ಎಂಬುದೇ ಭದ್ರತಾ ಸಿಬ್ಬಂದಿಗೂ ದೊಡ್ಡ ಪ್ರಶ್ನೆಯಾಗಿದೆ.
ಕೆಲ ದಿನಗಳ ಹಿಂದೆ ಇದೇ ನಿವಾಸದ ಬಳಿಯೇ ಜೋಡಿ ಕೊಲೆ ನಡೆದಿತ್ತು. ಆಗಲೂ ಸಿಎಂ ನಿವಾಸದ ಭದ್ರತೆ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಈ ಪ್ರದೇಶದ ಹಲವು ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದೂ ಹೇಳಲಾಗುತ್ತಿದ್ದು, ಸದ್ಯ ಪೊಲೀಸರು ಈ ಎಲ್ಲ ಅಂಶಗಳ ಕುರಿತು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಬಿಜೆಪಿ ರಣತಂತ್ರ: ಮುಂದಿನ ಗುರಿ ತೆಲಂಗಾಣ, ಪಶ್ಚಿಮ ಬಂಗಾಳ ಎಂದ ಅಮಿತ್ ಶಾ