ಪಥನಂತಿಟ್ಟಾ (ಕೇರಳ): ಶನಿವಾರ ನಡೆದ ಮಂಡಲ ಪೂಜೆಯೊಂದಿಗೆ ಶಬರಿಮಲೆ ಅಯ್ಯಪ್ಪಸ್ವಾಮಿಯ ಈ ಬಾರಿಯ ವಾರ್ಷಿಕ ಮಂಡಲಕಾಲ ಯಾತ್ರೆ ಸಂಪನ್ನಗೊಂಡಿದೆ.
ಥಂಕ ಅಂಕಿಯನ್ನು ಹೊತ್ತ ಮೆರವಣಿಗೆಯು ಡಿ.22 ರಂದು ಅರಣ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಆರಂಭಗೊಂಡಿತ್ತು. ಶುಕ್ರವಾರ ಬೆಳಗಿನ ಜಾವ 6.22 ಕ್ಕೆ ಈ ಮೆರವಣಿಗೆಯು ಶಬರಿಮಲೆ ಸನ್ನಿಧಾನಕ್ಕೆ ಆಗಮಿಸಿತ್ತು. ನಂತರ 6.30ಕ್ಕೆ ಮಹಾ ದೀಪಾರಾಧನೆ ಕಾರ್ಯಕ್ರಮ ಜರುಗಿತ್ತು.
ಇನ್ನು ಮಕರವಿಳಕ್ಕು ಹಬ್ಬದ ಅಂಗವಾಗಿ ಡಿ.30 ರ ಸಂಜೆ 5 ಗಂಟೆಗೆ ಮತ್ತೆ ದೇವಸ್ಥಾನದ ಬಾಗಿಲು ತೆರೆಯಲಿದೆ. ಈ ವರ್ಷದ ಡಿ.31 ರಿಂದ 2021ರ ಜನೇವರಿ 19 ರವರೆಗೆ ಮಕರವಿಳಕ್ಕು ಹಬ್ಬ ಜರುಗಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಭಕ್ತರಿಗೆ ಡಿ.31 ರಿಂದ ದೇವಸ್ಥಾನಕ್ಕೆ ಪ್ರವೇಶ ನೀಡಲಾಗುವುದು. ಜನೇವರಿ 14 ರಂದು ಮಕರವಿಳಕ್ಕು ಜ್ಯೋತಿ ಗೋಚರಿಸಲಿದೆ.