ಚೆನ್ನೈ(ತಮಿಳುನಾಡು): ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಗೆದ್ದರೆ, ಪ್ರಾಣತ್ಯಾಗ ಮಾಡುವುದಾಗಿ ಹರಕೆ ಹೊತ್ತಿದ್ದ ವ್ಯಕ್ತಿ, ಇಂದು ಹರಕೆ ಪೂರೈಸಿದ ವಿಚಿತ್ರ ಘಟನೆ ತಮಿಳುನಾಡಿನ ಕರೂರ್ ಎಂಬಲ್ಲಿ ನಡೆದಿದೆ.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಗೆಲ್ಲಬೇಕೆಂದು ಕರೂರ್ನ ಲಾಲ್ಪೇಟ್ ಪ್ರದೇಶದ ವಾಸವಿದ್ದ ಉಲಕನಾಥನ್ (60) ಹರಕೆ ಹೊತ್ತಿದ್ದ. ಈತ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿಯೂ ಹೌದು.
ಈಗ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದು, ಸ್ಟಾಲಿನ್ ಅಧಿಕಾರ ಸ್ವೀಕರಿಸಿದ ನಂತರ ಉಲಕನಾಥನ್ ಇಂದು ಹರಕೆ ತೀರಿಸುವ ಸಲುವಾಗಿ ಪುದು ಕಾಳಿಯಮ್ಮನ್ ದೇವಾಲಯಕ್ಕೆ ತೆರಳಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ದೇವಾಲಯದ ಸಿಬ್ಬಂದಿ ಬೆಂಕಿ ಆರಿಸಲು ಯತ್ನಿಸಿದ್ದು, ಆದರೆ ಸ್ಥಳದಲ್ಲೇ ಉಲಕನಾಥನ್ ಸಾವನ್ನಪ್ಪಿದ್ದು, ದೇಹ ಸುಟ್ಟು ಕರಕಲಾಗಿದೆ. ವಂಗಲ್ ಪೊಲೀಸರು ಸ್ಥಳಕ್ಕ ಧಾವಿಸಿ, ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಒಂದು ಪತ್ರ ದೊರೆತಿದೆ.
ಪತ್ರದಲ್ಲೇನಿದೆ..?
ಪೊಲೀಸರಿಗೆ ದೊರೆತ ಪತ್ರದಲ್ಲಿ ತಾನು ತನ್ನ ಹರಕೆಯನ್ನು ಪೂರೈಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಸೆಂಥಿಲ್ ಬಾಲಾಜಿ ಸಚಿವರಾಗಬೇಕೆಂದು, ಸ್ಟಾಲಿನ್ ಮುಖ್ಯಮಂತ್ರಿಯಾಗಬೇಕೆಂದು ನಾನು ಹರಕೆ ಹೊತ್ತಿದ್ದೆ ಎಂದು ಬರೆದಿದ್ದಾನೆ.
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳೇ ನಿಮ್ಮ ರೆಸ್ಯೂಮ್ ರೆಡಿ ಮಾಡಿ..! 40 ಸಾವಿರ ಉದ್ಯೋಗಿಗಳ ನೇಮಕಕ್ಕೆ TCS ನಿರ್ಧಾರ
ಸಿಎಂ ಆಗಿ ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಸುಮಾರು 30 ಸಾವಿರ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರೆಲ್ಲರೂ ಗುಣಮುಖವಾಗಲು ನಾನು ಕಾಯುತ್ತಿದ್ದೆ. ಈಗ ಹರಕೆ ಪೂರೈಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ವ್ಯಕ್ತಿಯ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಸಾಮಾನ್ಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.