ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದೂಗಳಲ್ಲಿನ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳ ಕೋಟಾದಡಿ ಮುಸ್ಲಿಮರು ಪ್ರತಿನಿಧಿಸುವ ಮೂಲಕ ಮೀಸಲಾತಿ ಮತ್ತು ಪ್ರಾತಿನಿಧ್ಯದ ನ್ಯಾಯಯುತ ಪಾಲನ್ನು ನಿರಾಕರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಒಬಿಸಿ-ಎ ಕೋಟಾ ಅಡಿಯಲ್ಲಿ ಪಶ್ಚಿಮ ಬಂಗಾಳ ಪೊಲೀಸರಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹಂಚಿಕೊಂಡ ಬಿಜೆಪಿ ಪಶ್ಚಿಮ ಬಂಗಾಳ ಸಹ-ಉಸ್ತುವಾರಿ ಅಮಿತ್ ಮಾಳವೀಯ “ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ತಾತ್ಕಾಲಿಕವಾಗಿ ಆಯ್ಕೆಯಾದವರ ಪಟ್ಟಿ ಇದು. ಮಮತಾ ಬ್ಯಾನರ್ಜಿ ಕೇವಲ ಜಾತಿಗಳ ಮೇಲೆ ಸಮತಾವಾದದ ನಂಬಿಕೆ ತುಂಡರಿಸಿಲ್ಲ, ಜೊತೆಗೆ ಒಬಿಸಿಗಳಿಗೆ ಮೀಸಲಾತಿ ಮತ್ತು ಪ್ರಾತಿನಿಧ್ಯದ ನ್ಯಾಯಯುತ ಪಾಲನ್ನು ನೀಡದೆ ಅವರ ಹಕ್ಕು ಕಸಿದಿದ್ದಾರೆ" ಎಂದು ದೂರಿದ್ದಾರೆ.
ಒಬಿಸಿ ವಿಭಾಗದಲ್ಲಿ ಪಟ್ಟಿ ಮಾಡಲಾದ 170 ಗುಂಪುಗಳಲ್ಲಿ 112 ಮುಸ್ಲಿಮರು, ಒಬಿಸಿ-ಎನ 80 ಗುಂಪುಗಳಲ್ಲಿ 72 ಮುಸ್ಲಿಮರು ಮತ್ತು ಒಬಿಸಿ-ಬಿನಲ್ಲಿ ಸುಮಾರು 40 ಗುಂಪುಗಳು ಮುಸ್ಲಿಮರಿದ್ದಾರೆ ಎಂದು ಮಾಳವೀಯ ಹೇಳಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಒಬಿಸಿ ವರ್ಗೀಕರಣದಲ್ಲಿ ಮುಸ್ಲಿಮರ ಅತಿಯಾದ ಪ್ರಾತಿನಿಧ್ಯವು ಆಘಾತಕಾರಿ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಮಾಳವೀಯ "ಪಶ್ಚಿಮ ಬಂಗಾಳವು ಕೇವಲ ಒಂದು ತುಂಡು ಭೂಮಿಯಲ್ಲ. ಇದು ಮುಕ್ತ ಚಿಂತನೆಯ ಬಂಗಾಳಿ ಹಿಂದೂಗಳು ಬದುಕಲು ಮತ್ತು ಸಮೃದ್ಧಿಯಾಗಬಲ್ಲ ಕಲ್ಪನೆಯಾಗಿದೆ. ಆ ಕಲ್ಪನೆ ಜನಸಂಖ್ಯಾ ಬದಲಾವಣೆಯನ್ನು ಉತ್ತೇಜಿಸುವ ಟಿಎಂಸಿಯಿಂದ ಉಲ್ಲಂಘನೆಯಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.