ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮಮತಾ ಅವರ ದೆಹಲಿ ಭೇಟಿಯ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಸೋಮವಾರ ಕೋಲ್ಕತ್ತಾದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಮಮತಾ ಬ್ಯಾನರ್ಜಿ ಬಿಎಸ್‌ಎಫ್ ಸಮಸ್ಯೆ ಮತ್ತು ಬಂಗಾಳದ ಇತರ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದ್ದರು.
ನ. 29 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಕೆಲವು ದಿನಗಳ ಮುಂಚಿತವಾಗಿ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೇ 28ರಂದು ಪಶ್ಚಿಮ ಬಂಗಾಳದ ಕಲೈಕುಂಡಾ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಮೋದಿಯ ಅವರನ್ನು ಮಮತಾ ಕೆಲವು ನಿಮಿಷಗಳ ಕಾಲ ಭೇಟಿ ಮಾಡಿದ್ದರು.
ಚಂಡಮಾರುತದಿಂದ ಸಂಭವಿಸಿದ ಹಾನಿ ಕುರಿತು ಪರಿಶೀಲನೆಗೆ ಪ್ರಧಾನಿಯವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಉಭಯ ನಾಯಕರೂ ಭೇಟಿಯಾಗಿದ್ದರು. ಆದರೆ, ಬಳಿಕ ಪ್ರಧಾನಿಯವರು ನಡೆಸಿದ ಸಭೆಗೆ ಮಮತಾ ಹಾಜರಾಗಿರಲಿಲ್ಲ. ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಪ್ರಧಾನಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.
ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸೋಂ ರಾಜ್ಯಗಳಲ್ಲಿ ಕೇವಲ 15 ಕಿ.ಮೀ ವರೆಗೆ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದ ಬಿಎಸ್‌ಎಫ್, ಈಗ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ಅಡೆತಡೆ ಅಥವಾ ಅನುಮತಿಯಿಲ್ಲದೇ ತನ್ನ ಅಧಿಕಾರ ವ್ಯಾಪ್ತಿಯನ್ನು 50 ಕಿ.ಮೀ ವರೆಗೆ ವಿಸ್ತರಿಸಲು ಅಧಿಕಾರ ಪಡೆದಿದೆ.
ಅಕ್ಟೋಬರ್‌ನಲ್ಲಿ ಈ ಕ್ರಮವನ್ನು ಸಿಎಂ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಪಂಜಾಬ್ ಸರ್ಕಾರದಂತೆಯೇ ಪಶ್ಚಿಮ ಬಂಗಾಳ ಸರ್ಕಾರವೂ ಸಹ ಗಡಿ ರಾಜ್ಯಗಳಲ್ಲಿ ಬಿಎಸ್‌ಎಫ್‌ನ ಶೋಧ ಮತ್ತು ಬಂಧನದ ವ್ಯಾಪ್ತಿ ಹೆಚ್ಚಿಸುವ ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟಿಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ಬಾಂಗ್ಲಾದೇಶದೊಂದಿಗಿನ ಪಶ್ಚಿಮ ಬಂಗಾಳದ ಗಡಿ ಸಂಪೂರ್ಣವಾಗಿ ಶಾಂತಿಯುತವಾಗಿದೆ. ನಮ್ಮ ಸರ್ಕಾರವು ರಾಜ್ಯದ ಕಾನೂನುಗಳಿಗೆ ಅನುಗುಣವಾಗಿ ಆಡಳಿತ ನಡೆಸುಕೊಂಡು ಹೋಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನವೆಂಬರ್ 29ರಂದು ಪಾರ್ಲಿಮೆಂಟ್ನತ್ತ ಟ್ರ್ಯಾಕ್ಟರ್ಗಳ ಮೆರವಣಿಗೆ: ರಾಕೇಶ್ ಟಿಕಾಯತ್