ಕಣ್ಣೂರು (ಕೇರಳ): 1938ರಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಇಂಗ್ಲಿಷ್‌ನಲ್ಲಿ ಪಾರಂಗತರಾಗಿದ್ದ, ಮಲಬಾರ್‌ನ ಮೊದಲ ಇಂಗ್ಲಿಷ್ ಸುಶಿಕ್ಷಿತ ಮುಸ್ಲಿಂ ಮಹಿಳೆ ಮಲಿಯೆಕ್ಕಲ್ ಮರಿಯುಮ್ಮ ತಮ್ಮ 99ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೇರಳದ ಮುಸ್ಲಿಂ ಮಹಿಳೆಯರ ವಿಮೋಚನೆ ಮತ್ತು ಅವರಿಗೆ ಶಿಕ್ಷಣ ನೀಡುವ ಹೋರಾಟದಲ್ಲಿ ಮರಿಯುಮ್ಮ ಅವರ ಜೀವನ ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಅಭಿರುಚಿ ಪ್ರಮುಖ ಪ್ರಭಾವ ಬೀರಿತ್ತು.
ಮರಿಯುಮ್ಮ ತನ್ನ ಸಮುದಾಯದಿಂದ ಎದುರಾದ ತೀವ್ರ ಪ್ರತಿರೋಧವನ್ನು ಲೆಕ್ಕಿಸದೇ 1938 ರಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿದ್ದ ತಲಸ್ಸೆರಿಯ ಸೇಕ್ರೆಡ್ ಹಾರ್ಟ್ ಕಾನ್ವೆಂಟ್‌ಗೆ ಸೇರಿದರು. ಆಗಿನ ಕಾಲದಲ್ಲಿ ಮುಸ್ಲಿಂ ಮಹಿಳೆಯರು ಶಾಲೆಗಳಿಗೆ ಹೋಗುವುದನ್ನು ಮತ್ತು ಅರೇಬಿಕ್ ಹೊರತುಪಡಿಸಿ ಯಾವುದೇ ಭಾಷೆ ಕಲಿಯುವುದನ್ನು ನಿಷೇಧಿಸಲಾಗಿತ್ತು.
ಅವರಿಗೆ ಶಾಲೆಗೆ ಪ್ರವೇಶ ಪಡೆದಾಗ ತನ್ನ ಸಮುದಾಯದವರಿಂದಲೇ ಸಾರ್ವಜನಿಕವಾಗಿ ಅವಮಾನಿಸಲ್ಪಟ್ಟಿದ್ದಳು. ಅಲ್ಲದೇ ಸಾಕಷ್ಟು ಕಿರುಕುಳಗಳನ್ನೂ ಎದುರಿಸಿದ್ದರು. ಆದಾಗ್ಯೂ ಯುವತಿ ಮರಿಯುಮ್ಮ ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದರು. ತಮ್ಮ ಶಾಲಾ ದಿನಗಳು ತನ್ನ ಜೀವನದ ಸುವರ್ಣ ಕಾಲವೆಂದು ಪರಿಗಣಿಸಿರುವುದಾಗಿ ನಂತರದ ದಿನಗಳಲ್ಲಿ ಅವರು ಸ್ಮರಿಸಿದ್ದರು.
ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರಾಗಿದ್ದ ಮರಿಯುಮ್ಮ ಅವರ ತಂದೆ, ಮರಿಯುಮ್ಮ ತನ್ನ ಶಾಲಾ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸಿದರು. ಆಗ ಮರಿಯುಮ್ಮ ಅವರಿಗೆ ಅರೇಬಿಕ್ ಮತ್ತು ಮಲಯಾಳಂ ಭಾಷೆಗಳು ಮಾತ್ರ ಬರುತ್ತಿದ್ದವು. ಹೀಗಾಗಿ ಅವರಿಗೆ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಟ್ಯೂಷನ್ ಟೀಚರ್ ಒಬ್ಬರನ್ನು ಕೂಡ ನೇಮಿಸಿದ್ದರು.
ಮರಿಯುಮ್ಮ ಆಗಿನ ಐದನೇ ಫೋರಂ ವರೆಗೆ ಓದಿದ್ದರು. ಅದು ಈಗಿನ 10ನೇ ತರಗತಿಗೆ ಸಮಾನವಾಗಿದೆ. ನಂತರ ಮದುವೆಯಾದ ಅವರು ಮನೆಯಿಂದಲೇ ತನ್ನ ಶಿಕ್ಷಣವನ್ನು ಮುಂದುವರೆಸಿದರು. ತನ್ನ ಜೀವಮಾನದಲ್ಲಿ ಅವರು ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನು ಓದಿ:ಮೆರಿಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ರೂಪಾಲಿ ನೇಮಕ