ನವದೆಹಲಿ: ಪ್ರಧಾನಿ ಮೋದಿ ಸಚಿವ ಸಂಪುಟ ಪುನಾರಚನೆ ಮಾಡಲಾಗಿದ್ದು, ಬಹುತೇಕ ಯುವ ಸಂಸದರಿಗೆ ನೂತನ ಕ್ಯಾಬಿನೆಟ್ನಲ್ಲಿ ಮಣೆ ಹಾಕಲಾಗಿದೆ. ಇದರ ಮಧ್ಯೆ ಮೊದಲನೇ ಅವಧಿಗೆ ಆಯ್ಕೆಯಾಗಿರುವ ದಕ್ಷ ಸಂಸದರಿಗೂ ಸಚಿವ ಸ್ಥಾನ ನೀಡಲಾಗಿದೆ.
ಗುಜರಾತ್ನ ಸುರೇಂದ್ರನಗರದ ಸಂಸದ ಡಾ.ಮುಂಜಪರ ಮಹೇಂದ್ರಭಾಯ್ಗೆ ಸಚಿವ ಸ್ಥಾನ ನೀಡಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಸಂಸದರಾಗಿರುವ ಇವರು, ಎದುರಾಳಿ ಅಭ್ಯರ್ಥಿಯನ್ನು ಸೋಲಿಸಿ 2.77 ಲಕ್ಷ ಮತ ಪಡೆದುಕೊಂಡಿದ್ದರು.
ಯಾರು ಈ ಮಹೇಂದ್ರಭಾಯ್?
ರಾಜಕೀಯ ಜೀವನ ಆರಂಭಿಸುವುದಕ್ಕೂ ಮೊದಲು ಮಹೇಂದ್ರಭಾಯ್ ಸುಮಾರು 30 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೃದಯತಜ್ಞ ಹಾಗೂ ಪ್ರೊಫೆಸರ್ ಆಗಿಯೂ ಇವರು ಗುರುತಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಗಳಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದ ಇವರು, ಕೇವಲ 2 ರೂಪಾಯಿಗೆ ಔಷಧಿ ನೀಡುತ್ತಿದ್ದರು ಎಂಬುದು ಗಮನಾರ್ಹ ಸಂಗತಿ.
ಸಾವಿರಾರು ಮೆಡಿಕಲ್ ಕ್ಯಾಂಪ್ ನಡೆಸಿರುವ ಮಹೇಂದ್ರಭಾಯ್ ಈವರೆಗೆ, 8 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಜತೆಗೆ ಗುಜರಾತ್ನ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಡಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಸುರೇಂದ್ರನಗರದಲ್ಲೇ ಜನಸೇವಾ ಆಸ್ಪತ್ರೆ ಇಟ್ಟಿಕೊಂಡಿದ್ದು, ರೋಗಿಗಳಿಗೆ ಕೇವಲ 2 ರೂಪಾಯಿಗೆ ಔಷಧಿ ನೀಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಕೂಡ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಪತ್ನಿ ಬಿಎಎಂಎಸ್ ಆಯುರ್ವೇದ ಮಾಡಿದ್ದಾರೆ.
ಇದನ್ನೂ ಓದಿರಿ: 35ನೇ ವಯಸ್ಸಿಗೆ ಕೇಂದ್ರ ಸಚಿವ ಸ್ಥಾನ! ಶಾಲಾ ಶಿಕ್ಷಕನಾಗಿ ಸಂಸದನಾದ ಯುವಕನಿಗೆ ಮೋದಿ ಮಣೆ
52 ವರ್ಷದ ಡಾ. ಮುಂಜಪರ ಮಹೇಂದ್ರಭಾಯ್ 1968ರಲ್ಲಿ ಜನಿಸಿದ್ದು, ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಹಮದಾಬಾದ್ನ NHL ವೈದ್ಯಕೀಯ ಕಾಲೇಜ್ನಲ್ಲಿ ಇವರು ಶಿಕ್ಷಣ ಪಡೆದುಕೊಂಡಿದ್ದಾರೆ. 2019ರಲ್ಲಿ ಗುಜರಾತ್ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದ ಸಂದರ್ಭದಲ್ಲಿ ಇವರ ಹೆಸರು ಕೇಳಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು.