ಮುಂಬೈ( ಮಹಾರಾಷ್ಟ್ರ): ದಕ್ಷಿಣ ಆಫ್ರಿಕಾದಿಂದ ಡೊಂಬಿವಿಲ್ಲಿಗೆ ಹಿಂದಿರುಗಿದ ಮಹಾರಾಷ್ಟ್ರದ ವ್ಯಕ್ತಿಯೊಬ್ಬರಿಗೆ ಭಾನುವಾರ ಕೋವಿಡ್ 19 ಇರುವುದು ದೃಢಪಟ್ಟಿದೆ ಎಂದು ಕಲ್ಯಾಣ್ ಡೊಂಬಿವಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ತಿಳಿಸಿದೆ.
ಕೆಡಿಎಂಸಿಯ ಆರೋಗ್ಯ ಅಧಿಕಾರಿ ಡಾ.ಪ್ರತಿಭಾ ಪಾನಪಾಟೀಲ್ ಮಾತನಾಡಿ, ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಗಿದೆ. ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು, ಅವರು ಹೊಸ ರೂಪಾಂತವಾದ ಒಮಿಕ್ರೋನ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬ ಖಚಿತಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಾಸಿಟಿವ್ ದೃಢಪಟ್ಟಿರುವ ಪ್ರಯಾಣಿಕ ದಕ್ಷಿಣ ಆಫ್ರಿಕಾದಿಂದ ದೆಹಲಿ ಮೂಲಕ ಮುಂಬೈಗೆ ಪ್ರಯಾಣಿಸಿದ್ದರು. ಅವರನ್ನು ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ಅವರ ಸಹೋದರನಿಗೆ ಕೋವಿಡ್ ನೆಗೆಟಿವ್ ಬಂದಿದೆ. ಇನ್ನೊಂದೆಡೆ ಅವರ ಕುಟುಂಬದ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಒಮಿಕ್ರೋನ್ ಭೀತಿ: ಬೆಳಗಾವಿ ಅಧಿವೇಶನಕ್ಕೆ ಮತ್ತೆ ಕರಿನೆರಳು
B.1.1.529 ರೂಪಾಂತರವು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ WHO ಹೇಳಿದೆ. ಇತ್ತೀಚಿನ ವಾರಗಳಲ್ಲಿ, B.1.1.529 ರೂಪಾಂತರವನ್ನು ಪತ್ತೆಹಚ್ಚುವುದರೊಂದಿಗೆ ಸೋಂಕುಗಳು ತೀವ್ರವಾಗಿ ಹಬ್ಬುತ್ತಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಈ ರೂಪಾಂತರದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆ ಕಂಡು ಬರುತ್ತಿದೆ.