ಲಖನೌ(ಉತ್ತರ ಪ್ರದೇಶ): ಪಬ್ಜಿ ಚಟಕ್ಕೊಳಗಾಗಿ ಹೆತ್ತಮ್ಮನ ಗುಂಡಿಕ್ಕಿ ಕೊಲೆ ಮಾಡಿದ್ದ 16 ವರ್ಷದ ಬಾಲಕ, ಮೃತದೇಹ ವಿಲೇವಾರಿ ಮಾಡಲು ತನ್ನ ಸ್ನೇಹಿತರೊಂದಿಗೆ 5 ಸಾವಿರ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದ ಮಾಹಿತಿ ಬಹಿರಂಗವಾಗಿದೆ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಬಾಲಕ ಮೊಬೈಲ್ನಲ್ಲಿ ಪಬ್ಜಿ ಆಟವಾಡ್ತಿದ್ದನು. ಈ ವಿಚಾರವಾಗಿ ಅನೇಕ ಸಲ ತಾಯಿ ಜೊತೆ ಜಗಳವಾಡಿದ್ದನು. ಕಳೆದ ಶನಿವಾರ ತಾಯಿ ಮನೆಯಲ್ಲಿ ಮಲಗಿದ್ದಾಗ ಪಿಸ್ತೂಲ್ನಿಂದ ತಾಯಿಯ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದನು. ಇದಾದ ಬಳಿಕ ಮೂರು ದಿನಗಳ ಕಾಲ ಬೆಡ್ ರೂಂನಲ್ಲಿ ಶವ ಬಚ್ಚಿಟ್ಟಿದ್ದನು. ವಾಸನೆ ಬಾರದಂತೆ ತಡೆಯಲು ಮೇಲಿಂದ ಮೇಲೆ ರೂಮ್ ಫ್ರೆಶ್ನರ್ ಬಳಕೆ ಮಾಡ್ತಿದ್ದನು.
ಇದರ ಬೆನ್ನಲ್ಲೇ ತಾಯಿಯ ಮೃತದೇಹ ವಿಲೇವಾರಿ ಮಾಡಲು ಸ್ನೇಹಿತರೊಂದಿಗೆ 5 ಸಾವಿರ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದನಂತೆ. ಆದರೆ, ಕೊನೆಯ ಗಳಿಗೆಯಲ್ಲಿ ಅವರು ಕೈಕೊಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪಬ್ಜಿ ಚಟ.. ಸೇನಾಧಿಕಾರಿ ಮಗನಿಂದ ಹೆತ್ತಮ್ಮನ ಕೊಲೆ, ತಾಯಿ ಶವದೊಂದಿಗೆ 3 ದಿನ ಕಳೆದ ಅಣ್ಣ-ತಂಗಿ!
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ತಾಯಿ ಸಾಧನಾ ಮೂರು ದಿನಗಳಿಂದ ಕಾಣಿಸಿಕೊಳ್ಳದ ಕಾರಣ, ಅಕ್ಕಪಕ್ಕದವರು ಮಗಳ ಬಳಿ ಕೇಳಿದ್ದಾರೆ. ಈ ವೇಳೆ ಅಜ್ಜಿ ಅನಾರೋಗ್ಯಕ್ಕೀಡಾಗಿದ್ದು, ಅಲ್ಲಿಗೆ ಹೋಗಿದ್ದಾಗಿ ತಿಳಿಸಿದ್ದಾನೆ. ಆದರೆ, ತಾಯಿಯ ಮೃತದೇಹದ ವಾಸನೆ ಹೆಚ್ಚಾಗಿದ್ದರಿಂದ ಬೇರೆ ಊರಿನಲ್ಲಿರುವ ತಂದೆಗೆ ಕರೆ ಮಾಡಿ, ತಾಯಿಯನ್ನ ಯಾರೋ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಸುದ್ದಿ ತಿಳಿದ ಬಳಿಕ ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಬಾಲಕನನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಮಗನ ಮೇಲೆ ತಾಯಿಗೆ ಕೋಪ: ಮೂಲಗಳ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಗನ ಹುಟ್ಟುಹಬ್ಬದಂದು ಪತಿ - ಪತ್ನಿಯ ನಡುವೆ ಜಗಳವಾಗಿತ್ತು. ಮಗನಿಂದಲೇ ಈ ಜಗಳ ನಡೆದಿದೆ ಎನ್ನಲಾಗಿದ್ದು, ಅಂದಿನಿಂದ ಸಾಧನಾ ಮಗನ ಮೇಲೆ ಕೋಪಗೊಂಡಿದ್ದಳು. ಅಷ್ಟೇ ಅಲ್ಲ, ಕೊಲೆಯಾಗುವ ಮೂರು ದಿನಗಳ ಮೊದಲು ಸಾಧನಾ ಮನೆಯಲ್ಲಿದ್ದ 10,000 ರೂ. ಕಾಣದಿದ್ದಾಗ ತನ್ನ ಮಗನಿಗೆ ಥಳಿಸಿದ್ದರು. ಸ್ವಲ್ಪ ಸಮಯದ ನಂತರ ಸಾಧನಾ ಬಳಿ ಆ ಹಣ ಪತ್ತೆಯಾಗಿತ್ತು. ಇದರಿಂದ ಆತ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದ, ಅಕ್ಟೋಬರ್‌ನಿಂದ ಸಾಧನಾ ತನ್ನ ಮಗನಿಗೆ ಎಲ್ಲದಕ್ಕೂ ಅಡ್ಡಿಪಡಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ತಂಗಿಗೆ ಜೀವ ಬೆದರಿಕೆ: ಬಾಲಕ ತನ್ನ ತಾಯಿಯನ್ನು ಕೊಲೆ ಮಾಡಿದಾಗ ಸಾಧನಾಳ 10 ವರ್ಷದ ಸಹೋದರಿ ಕೂಡ ಮನೆಯಲ್ಲಿ ಮಲಗಿದ್ದಳು. ಗುಂಡಿನ ಸದ್ದು ಕೇಳಿದ ತಂಗಿಗೆ ಎಚ್ಚರವಾಗಿದೆ. ಕೂಡಲೇ ಆಕೆಯನ್ನು ಸ್ಟಡಿ ರೂಮಿಗೆ ಕರೆದುಕೊಂಡು ಹೋಗಿ ಮತ್ತೆ ಮಲಗಿಸಿದ್ದಾನೆ. ಬೆಳಗ್ಗೆ ಎದ್ದ ತಂಗಿಯನ್ನು ಯಾರಿಗಾದರೂ ಈ ವಿಷಯ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ 10 ವರ್ಷದ ಅಮಾಯಕ 3 ದಿನಗಳ ಕಾಲ ಸ್ಟಡಿ ರೂಂನಿಂದ ಹೊರಗೆ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.