ಪತ್ತನಂತಿಟ್ಟ (ಕೇರಳ): ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ 2ನೇ ಸಲ ತೆರೆಯಲಾಗಿದೆ. ಮಕರವಿಳಕ್ಕು(ಸಂಕ್ರಾಂತಿ) ಹಬ್ಬದ ಆಚರಣೆಗಾಗಿ ಶನಿವಾರದಿಂದಲೇ ದೇವಸ್ಥಾನಕ್ಕೆ ಭಕ್ತರ ಭೇಟಿಯನ್ನು ಪುನಃ ಆರಂಭಿಸಲಾಗಿದೆ. ಜನವರಿ 14 ರಂದು ಸಂಕ್ರಾಂತಿ ಹಬ್ಬದ ಪೂಜೆ ನಡೆದ ಬಳಿಕ 20 ರಂದು ಬಂದ್ ಮಾಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಭಕ್ತಗಣದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ನಡುವೆ ದೇವಸ್ಥಾನದ ಬಾಗಿಲನ್ನು ಪುನಃ ತೆರೆಯಲಾಯಿತು. ದೇಗುಲದ ಮುಖ್ಯ ಅರ್ಚಕರಾದ(ತಂತ್ರಿ) ಕಂದರಾರು ರಾಜೀವರು ಬಾಗಿಲು ತೆರೆದು ದರ್ಶನಕ್ಕೆ ಚಾಲನೆ ನೀಡಿದರು. ಪೂಜಾದಿ ಕಾರ್ಯಕ್ರಮಗಳ ಬಳಿಕ ಮಧ್ಯಾಹ್ನದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
2 ತಿಂಗಳ ತೀರ್ಥಯಾತ್ರೆಯ ಭಾಗವಾಗಿ ಮೊದಲ ಹಂತದಲ್ಲಿ ದೇವಸ್ಥಾನವನ್ನು ನವೆಂಬರ್ 17 ರಂದು ಆರಂಭಿಸಲಾಯಿತು. ಸತತ 30 ದಿನಗಳ ಬಳಿಕ ಅಂದರೆ ಡಿಸೆಂಬರ್ 27 ರಂದು ಮಂಡಲ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನ ಬಂದ್ ಮಾಡಲಾಯಿತು.
ಈ ಅವಧಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಭಕ್ತರು ಅಯ್ಯಪ್ಪಸ್ವಾಮಿ ದರ್ಶನ ಪಡೆದರು. ಈ ವರ್ಷ ಮೊದಲ ಅವಧಿಯಲ್ಲಿ 222.98 ಕೋಟಿ ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ ಎಂದು ದೇವಾಲಯದ ಆಡಳಿತದ ಉಸ್ತುವಾರಿ ವಹಿಸಿರುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ತಿಳಿಸಿದೆ.
ಓದಿ: ಜ್ಯುವೆಲ್ಲರಿ ಜಾಹೀರಾತಿನಲ್ಲಿ ಮಿಂಚಿದ 'ಕಂಬಳದ ಉಸೈನ್ ಬೋಲ್ಟ್' ಶ್ರೀನಿವಾಸ ಗೌಡ!