ಸುಗ್ಗಿಯನ್ನು ಸಂಭ್ರಮಿಸಲೆಂದೇ ಹಲವಾರು ಹಬ್ಬಗಳನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಜನವರಿ 13ರಂದು ಉತ್ತರ ಭಾರತದ ಕೆಲವು ರಾಜ್ಯಗಳು ಅದರಲ್ಲೂ ಪಂಜಾಬ್ ಭಾಗದಲ್ಲಿ 'ಲೊಹ್ರಿ' ಎಂಬ ಜಾನಪದ ಉತ್ಸವ ಕಳೆಗಟ್ಟುತ್ತೆ. ಇದನ್ನು ಮಾಘಿ ಅಂತಲೂ ಕರೆಯಲಾಗುತ್ತದೆ.
ಈ ಜಾನಪದ ಉತ್ಸವದಲ್ಲಿ ಇದರ ಜೊತೆಗೆ ವಿವಿಧ ಧಾನ್ಯಗಳಿಂದ ತರಹೇವಾರಿ ತಿನಿಸುಗಳನ್ನು ತಯಾರಿಸಿ ಸವಿಯಲಾಗುತ್ತದೆ. ಜಾನಪದ ಹಾಡುಗಳನ್ನು ಹಾಡುವುದರ ಜೊತೆಗೆ, ದೀಪಗಳನ್ನು ಬೆಳಗುವುದು ಹಾಗೂ ಕಟ್ಟಿಗೆಯನ್ನು ಕೂಡಿಸಿ ಬೆಂಕಿ ಹೊತ್ತಿಸಿ, ಕುಣಿಯುವುದು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಒಮ್ಮೊಮ್ಮೆ ಈ ಉತ್ಸವದಲ್ಲಿ ಬೆಂಕಿ ಹಾಕಿ ಕುಣಿಯುವ ಕಾರಣದಿಂದ ಅನೇಕ ಅವಘಡಗಳು, ಅನಾರೋಗ್ಯವೂ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಅವಘಡ ಮತ್ತು ಅನಾರೋಗ್ಯದಿಂದ ರಕ್ಷಿಸಿಕೊಳ್ಳಲು ಮತ್ತು ಪರಿಸರ ಸ್ನೇಹಿ ಲೊಹ್ರಿಯಲ್ಲಿ ಭಾಗಿಯಾಗಲು ಇಲ್ಲಿ ಕೆಲವು ಸಲಹೆಗಳಿವೆ.
ಕೋವಿಡ್ ಸೋಂಕು ಉಲ್ಬಣವಾದ ಕಾರಣದಿಂದಾಗಿ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಣೆ ಮಾಡುವುದನ್ನು ಕಡಿಮೆ ಮಾಡಲಾಗಿದೆ. ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಹಬ್ಬಗಳನ್ನು ಆಚರಣೆ ಮಾಡಿಕೊಳ್ಳುತ್ತಾರೆ. ಉತ್ಸವದ ವೇಳೆ ಹಾಕುವ ಬೆಂಕಿಯಿಂದಾಗುವ ಹೊಗೆಯ ಕಾರಣದಿಂದ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ನೀವು ಪಾಲಿಸಬೇಕಾದ ಅಂಶಗಳೆಂದರೆ..
1. ಲೊಹ್ರಿ ಉತ್ಸವದ ವೇಳೆ ಬೆಂಕಿ ಹಾಕುವ ವೇಳೆ ಸಾಕಷ್ಟು ಅಂಶಗಳನ್ನು ತೆಗೆದುಕೊಳ್ಳಬೇಕು. ಹೆಚ್ಚು ಹೊಗೆ ಉಂಟಾಗದಂತೆ ತಪ್ಪಿಸಲು ಪೇಪರ್ ಹಾಗೂ ಹಸಿಮರದ ತುಂಡನ್ನು ಬಳಸಬಾರದು. ಬದಲಾಗಿ ಇದ್ದಿಲು ಮತ್ತು ಒಣ ಮರದ ತುಂಡುಗಳನ್ನು ಬಳಸುವುದು ಅತ್ಯಂತ ಸೂಕ್ತ.
2. ಲೊಹ್ರಿ ಹಬ್ಬದಲ್ಲಿ ಬೆಂಕಿಗೆ ಹಲವು ಪದಾರ್ಥಗಳನ್ನು ಎಸೆಯುವ ಸಂಪ್ರದಾಯವಿದೆ. ಬೆಂಕಿಯ ಸುತ್ತಲೂ ನೀವು ಸುತ್ತುತ್ತಿರುವಾಗ ತ್ಯಾಜ್ಯ ಪದಾರ್ಥಗಳನ್ನು ಎಸೆಯುವುದನ್ನು ಕಡಿಮೆ ಮಾಡಿ. ಇದರಿಂದ ಹೊಗೆಯ ಪ್ರಮಾಣ ಕಡಿಮೆಯಾಗುತ್ತದೆ.
3. ಪರಿಸರ ಸ್ನೇಹಿ, ಹೊಗೆರಹಿತ ಉತ್ಸವ ಆಚರಿಸಬೇಕೆಂದು ನಿಮಗೆ ಅನ್ನಿಸಿದರೆ, ಎಥೆನಾಲ್ ಅನ್ನು ಇಂಧನವಾಗಿ ಬಳಸಬಹುದು. ಎಥೆನಾಲ್ ಪರಿಸರ ಸ್ನೇಹಿ ಜೈವಿಕ ಇಂಧನವಾಗಿದ್ದು, ಹೊಗೆ ಮತ್ತು ಇನ್ನಿತರ ರಾಸಾಯನಿಕ ಅಂಶಗಳನ್ನು ಹೊರಸೂಸುವುದಿಲ್ಲ.
4. ಅತ್ಯಂತ ಹೆಚ್ಚು ಗುಣಮಟ್ಟದ ಕಲ್ಲಿದ್ದಲು ಬಳಕೆ ಸೂಕ್ತ. ಅಂಥ್ರಾಸೈಟ್ ಕಲ್ಲಿದ್ದಲು ಬಳಕೆ ಮಾಡಿದರೆ ಒಳಿತು.
ಇದನ್ನೂ ಓದಿ: ವೈಕುಂಠ ಏಕಾದಶಿ: ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಸಿಜೆಐ ಎನ್ವಿ ರಮಣ