ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರ ಮತ್ತು ಉದ್ವಿಗ್ನ ಪರಿಸ್ಥಿತಿ ನಿಲ್ಲುವಂತೆ ಕಾಣುತ್ತಿಲ್ಲ. ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಅಗತ್ಯವಾದ ಯಾವುದೇ ಆಹಾರ ಪದಾರ್ಥಗಳನ್ನು ಒದಗಿಸಬಾರದು, ಅವರಿಗೆ ಚಹಾ ಕೂಡ ನೀಡುವುದಿಲ್ಲ, ಎಂದು ಇತ್ತೀಚೆಗೆ, ತೃಣಮೂಲವು ಕೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಫತ್ವಾ ಹೊರಡಿಸಿದ್ದು, ಈ ಪ್ರದೇಶದಲ್ಲಿ ರಾಜಕೀಯ ಉದ್ವಿಗ್ನತೆ ಭುಗಿಲೆದ್ದಿದೆ.
"ಮಹಿಸ್ದ ಸರ್ವ ಭಾರತೀಯ ತೃಣಮೂಲ ಕಾಂಗ್ರೆಸ್" ಹೆಸರಿನಲ್ಲಿ 176 ಮತ್ತು 179 ಬೂತ್ ಸಂಖ್ಯೆಯಲ್ಲಿ ಈ ರೀತಿಯ ಪೋಸ್ಟರ್‌ಗಳು ಮುದ್ರಿಸಲ್ಪಟ್ಟಿವೆ. ಫತ್ವಾದಲ್ಲಿ, ವಿರೋಧ ಪಕ್ಷದ ಬೆಂಬಲಿಗರು ಎಂದು ಕರೆಯಲ್ಪಡುವ 18 ಜನರ ಪಟ್ಟಿ ಇದೆ. ಈ ಕ್ಷೇತ್ರದಲ್ಲಿ ಚಹಾ ಸೇವಿಸಲು ಯಾವುದೇ ಗ್ರಾಮಸ್ಥರಿಗೆ ಅವಕಾಶವಿಲ್ಲ ಮತ್ತು ಯಾವುದೇ ಅಂಗಡಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬಾರದು ಎಂದು ಫತ್ವಾ ನಿರ್ದೇಶಿಸಿದೆ.
ಕೇಶಪುರದ ಬಿಜೆಪಿ ಮುಖಂಡ ತನ್ಮೋಯ್ ಘೋಷ್ ಈ ಬಗ್ಗೆ ಪ್ರತಿಕ್ರಿಯಿಸಿ "ಇದು ಹೊಸದಲ್ಲ. ವಿಧಾನಸಭಾ ಚುನಾವಣಾ ಫಲಿತಾಂಶದ ದಿನದಿಂದಲೇ ಟಿಎಂಸಿ ಇವೆಲ್ಲವನ್ನೂ ಪ್ರಾರಂಭಿಸಿದೆ. ಅವರು ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸ ಮಾಡುತ್ತಿದ್ದಾರೆ, ಲೂಟಿ ಮಾಡುತ್ತಿದ್ದಾರೆ ಮತ್ತು ಈಗ ಅವರು ಈ ಫತ್ವಾ ನೀಡಿದ್ದಾರೆ" ಎಂದು ಹೇಳಿದ್ರು.
ಅದೇ ರೀತಿ "ಇದು ಹೊಸತೇನಲ್ಲ. ರಾಜ್ಯಾದ್ಯಂತ ನಮ್ಮ ಪಕ್ಷದ ಜನರು ವಿವಿಧ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ" ಎಂದು ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಆದರೆ, ಈ ಫತ್ವಾ ವಿರುದ್ಧ ಘಾಟಲ್ ಸಂಸದ ಮತ್ತು ನಟ ದೀಪಕ್ ಅಧಿಕಾರಿ (ದೇವ್) ಮಾತನಾಡಿ ಫತ್ವಾ ಹೊರಡಿಸಿದವರಿಗೆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.