ಅಹಮದಾಬಾದ್: ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯನ್ನು ನೇರಪ್ರಸಾರ ಮಾಡುವುದರಿಂದ ನ್ಯಾಯ ವಿತರಣಾ ವ್ಯವಸ್ಥೆಯ ಬಗೆಗಿನ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಸುಪ್ರೀಂಕೋರ್ಟ್ ತನ್ನ ಕೆಲವು ನ್ಯಾಯಾಲಯಗಳಿಂದ ವಿಚಾರಣೆಯ ನೇರಪ್ರಸಾರ ಮಾಡಲು ಉತ್ಸುಕವಾಗಿದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶನಿವಾರ ಹೇಳಿದ್ದಾರೆ.
ಗುಜರಾತ್ ಹೈಕೋರ್ಟ್ನ ವಿಚಾರಣೆಯ ನೇರ ಪ್ರಸಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ನಡೆಯುವ ವಿಚಾರಣೆಗಳನ್ನು ಶೀಘ್ರದಲ್ಲೇ ನೇರ ಪ್ರಸಾರ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳು ನಡೆದಿವೆ. ವಿವಿಧ ನ್ಯಾಯಾಲಯಗಳ ವಿಚಾರಣೆಯನ್ನು ನೇರಪ್ರಸಾರ ಮಾಡಲು ಸುಪ್ರೀಂಕೋರ್ಟ್ ಚಿಂತನೆ ನಡೆಸಿದೆ ಎಂದರು.
ಸದ್ಯ ನ್ಯಾಯಾಲಯಗಳ ಚಟುವಟಿಕೆಗಳ ಮಾಹಿತಿಯನ್ನು ಜನರು ಮಾಧ್ಯಮಗಳ ಮೂಲಕ ಪಡೆಯುತ್ತಿದ್ದಾರೆ. ಆದರೆ, ಮಾಧ್ಯಮಗಳಿಂದ ಕೆಲವು ಬಾರಿ ಅರೆಬರೆ ಅಥವಾ ತಪ್ಪು ಮಾಹಿತಿ ಪ್ರಕಟವಾಗುತ್ತದೆ. ಈ ಮೂಲಕ ನ್ಯಾಯಾಲಯಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನಗಳೂ ನಡೆಯುತ್ತವೆ ಎಂದು ಮುಖ್ಯನ್ಯಾಯಮೂರ್ತಿ ಆತಂಕ ವ್ಯಕ್ತಪಡಿಸಿದರು.
ಆದರೆ ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡುವುದರಿಂದ ಇಂತಹ ಯಾವುದೇ ಗೊಂದಲಗಳಿರುವುದಿಲ್ಲ. ಜನರು ಸ್ಪಷ್ಟವಾದ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಿರು ಪರಿಚಯ
ಸಂವಿಧಾನದಡಿಯಲ್ಲಿ ನೀಡಲಾಗಿರುವ ಹಕ್ಕಿನಂತೆ ಜನರು ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಬಹುದು. ಹಾಗಾಗಿ ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ನೇರಪ್ರಸಾರ ಮಾಡಲಾಗುವುದು ಎಂದು ಸಿಜೆಐ ಮಾಹಿತಿ ನೀಡಿದರು.