ಬಂಕಾ (ಬಿಹಾರ) : ಮದ್ಯ ವ್ಯವಹಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮೂವರು ದುಷ್ಕರ್ಮಿಗಳು ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಅಮರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರ ಎಂಬಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್ ಸಿಬ್ಬಂದಿ ಲಖ್ಪತಿ ಸಿಂಗ್ನ ಪತ್ನಿ ರೀಮಾ ಕುಮಾರಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಮದಹೇವಪುರ ನಿವಾಸಿಯಾಗಿರುವ ಲಖ್ಪತಿ ಸಿಂಗ್ ಜಾರ್ಖಂಡ್ ಸಶಸ್ತ್ರ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮಂಗಳವಾರ ರಾತ್ರಿ ಪೊಲೀಸ್ ಲಖ್ಪತಿ ಸಿಂಗ್ ತನ್ನ ಪತ್ನಿಯೊಂದಿಗೆ ಮನೆಯ ಹೊರಗಡೆ ಕುಳಿತಿದ್ದಾಗ ಮೂವರು ಬಂದು ಹಲ್ಲೆ ನಡೆಸಿದ್ದಾರೆ. ಇದೇ ಗ್ರಾಮದವರಾದ ಮಿಥಿಲೇಶ್ ಶರ್ಮಾ ಮತ್ತು ಪುತ್ರರಾದ ರೋಹಿತ್ ಕುಮಾರ್ ಮತ್ತು ಛೋಟು ಎಂಬವವರು ದೊಣ್ಣೆ ಮತ್ತು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಪೊಲೀಸ್ ಸಿಬ್ಬಂದಿ ಲಖ್ಪತಿ ಸಿಂಗ್ ನೆಲಕ್ಕೆ ಉರುಳಿದ್ದಾರೆ. ಆಗಲೂ ಮೂವರು ಸೇರಿ ಅಮಾನುಷವಾಗಿ ಥಳಿಸಿದ್ದಾರೆ. ಅಲ್ಲದೇ ಈ ವೇಳೆ ಮಿಥಿಲೇಶ್ ಶರ್ಮಾ, ಆತ ನಮ್ಮ ವ್ಯವಹಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅವನನ್ನು ಕೊಲ್ಲಬೇಕು ಎಂದು ಕೂಗಿದ್ದಾನೆ. ಈ ವೇಳೆ ಛೋಟು ಕುಮಾರ್ ಎಂಬವನು ಲಖ್ಪತಿ ಸಿಂಗ್ ಎದೆ ಮೇಲೆ ಕುಳಿತು ಹರಿತವಾದ ಆಯುಧದಿಂದ ಬಲಗಣ್ಣಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಲಖ್ಪತಿ ಪತ್ನಿ ಜೋರಾಗಿ ಕಿರುಚಿದ್ದು, ಅಕ್ಕ ಪಕ್ಕದ ಜನರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಇದನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಳಿಕ ಗಾಯಾಳು ಲಖ್ಪತಿ ಸಿಂಗ್ನನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಇಲ್ಲಿನ ಚಿಕಿತ್ಸೆ ಬಳಿಕ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಭಾಗಲ್ಪುರಕ್ಕೆ ರವಾನಿಸಲಾಗಿತ್ತು. ಇನ್ನು ಕಣ್ಣಿಗೆ ಗಂಭೀರ ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲು ಪಾಟ್ನಾ ಮತ್ತು ಚೆನ್ನೈನ ಆಸ್ಪತ್ರೆಗೆ ಸೂಚಿಸಲಾಗಿತ್ತು. ಶುಕ್ರವಾರ ಇಲ್ಲಿ ಅವರ ಕಣ್ಣಿಗೆ ಆಪರೇಷನ್ ನಡೆಸಲಾಗಿದೆ.
ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿರುವ ಅಮರ್ಪುರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬಿಹಾರದಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದ್ದು, ಲಿಕ್ಕರ್ ಮಾಫಿಯಾ( ಮದ್ಯ ಮಾಫಿಯಾ) ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಇದನ್ನೂ ಓದಿ : ಜಪ್ತಿ ಮಾಡಿದ ಡ್ರಗ್ಸ್ ಮಾರಾಟಕ್ಕೆ ಯತ್ನ ಆರೋಪ: ಹೈದರಾಬಾದ್ನಲ್ಲಿ ಎಸ್ಐ ಅರೆಸ್ಟ್